ವಿಜಯವಾಣಿಯಾದರೇನು ದೀಪಿಕಾ ಪಡುಕೋಣೆಯಾದರೇನು ಬಿಜೆಪಿ ವಿರುದ್ಧ ಮಾತನಾಡಿದರೆ “ದೇಶದ್ರೋಹದ ಪಟ್ಟ ಫಿಕ್ಸ್” – ದೇಶಾದ್ಯಂತ ನಿರ್ಮಾಣವಾಗುತ್ತಿದೆ ಒಂದು ರೀತಿಯ ಕೆಟ್ಟ ವಾತಾವರಣ !

ಬಾಲಿವುಡ್ ರಾಜಕೀಯ ರಾಜ್ಯ ರಾಷ್ಟ್ರೀಯ

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದಲ್ಲಿ ತೀರಾ ವಿಚಿತ್ರವೆನಿಸುವ ಅಪಾಯಕಾರಿ ಎನ್ನಬಹುದಾದ ಸನ್ನಿವೇಶವೊಂದು ರೂಪುಗೊಳ್ಳುತ್ತಿದೆ, ಅದೇನೆಂದರೆ ಬಿಜೆಪಿಯ ವಿರುದ್ಧ ಯಾರೇ ಮಾತನಾಡಿದರೂ ಸಹ ಅವರು ದೇಶದ್ರೋಹಿಗಳು ಎಂದು ಬಿಂಬಿಸಲು ಪ್ರಯತ್ನಿಸುವುದು.ಈಗಾಗಲೇ ಒಂದು ಅತಿರೇಕದ ಹಂತಕ್ಕೆ ತಲುಪಿರುವ ಈ ವಾತಾವರಣವು ದೇಶದ ಹಿತದ ದೃಷ್ಟಿಯಿಂದ, ರಚನಾತ್ಮಕ ಟೀಕೆಯ ಉಳಿವಿನ ದೃಷ್ಟಿಯಿಂದ ಮತ್ತು ಪ್ರಜಾಪ್ರಭುತ್ವದ ಜೀವಂತಿಕೆಯ ದೃಷ್ಟಿಯಿಂದ ಅಷ್ಟೇನೂ ಹಿತಕರವಲ್ಲದ ಬೆಳವಣಿಗೆಯಾಗಿದೆ.

Image may contain: 1 person

2014 ರಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತೇವೆ ಎಂದು ಬಹುಮತವನ್ನು ಪಡೆದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನ್ನ 5 ವರ್ಷದ ಆಡಳಿತಾವಧಿಯಲ್ಲಿ ತಾನು ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ಭಾರತೀಯತೆ ಭಾವನೆಯನ್ನು ಬಿತ್ತಲು ಯತ್ನಿಸುವ ಹಾದಿಯಲ್ಲಿ ಭಾರತದ ಅಭಿವೃದ್ಧಿಯನ್ನು ಮೂಲೆಗೆ ಸರಿಸಿದೆ. ಇದರ ಪ್ರಮಾಣವೇ 2013 ರಲ್ಲಿ 7.5 ರಷ್ಟಿದ್ದ ಜಿಡಿಪಿ ದರವು ಇಂದು 4.5% ಗೆ ಕುಸಿದಿದ್ದು ನಿರುದ್ಯೋಗ ದರ ಹೆಚ್ಚಾಗಿ, ಹಸಿವಿನ ಸೂಚ್ಯಂಕದಲ್ಲಿ ದೇಶದ ಸಾಧನೆ ಕಳಪೆಯಾಗಿದೆ. ಬಹುಶಃ ವಿಶ್ವಗುರು ಭಾರತವೆಂದರೆ ಎಲ್ಲ ವಿಭಾಗಗಳಲ್ಲೂ ಜಗತ್ತಿನ ಇತರೆ ದೇಶಗಳ ಎದುರು ಮಂಡಿಯೂರಿ ಕುಳಿತುಕೊಳ್ಳುವುದು ಎನ್ನುವುದಲ್ಲ. ಹೀಗಾಗಿಯೇ ಸದೃಢ ಭಾರತದ ನಿರ್ಮಾಣದ ಸಲುವಾಗಿ ಹುಟ್ಟಿಕೊಳ್ಳುತ್ತಿರುವ ಟೀಕೆಯನ್ನು ಆರೋಗ್ಯಪೂರ್ಣವಾಗಿ ಸ್ವೀಕರಿಸಿ ತಪ್ಪಿದ್ದಾಗ ತಿದ್ದಿ ನಡೆಯುವುದು ಸರ್ಕಾರದ ಪ್ರಜಾಸತ್ತಾತ್ಮಕ ನಡೆ.

ಆದರೆ ಈಗಿನ ಭಾರತದ ಸನ್ನಿವೇಶವು ಬೇರೆಯೇ ಆಗಿ ತಿರುವು ಪಡೆದುಕೊಳ್ಳುತ್ತಿದೆ. ಸರ್ಕಾರವನ್ನು ವಿಮರ್ಶೆ ಮಾಡಿದರೆ ಆತ ದೇಶದ್ರೋಹಿ ಎನ್ನುವಷ್ಟರ ಮಟ್ಟಿಗೆ ಪ್ರತಿಕ್ರಿಯೆ ನೀಡುವಂತಹ ಪ್ರವೃತ್ತಿ ಜಾರಿಯಲ್ಲಿದೆ. ಅದರಲ್ಲೂ ದೇಶದ ಆರ್ಥಿಕತೆಯಂತಹ ಗಂಭೀರ ಸಂಗತಿಯ ಬಗ್ಗೆ ಬೆಳಕು ಚೆಲ್ಲಿದಾಗ ಪಕ್ಷಕ್ಕೆ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅತಿ ಹೆಚ್ಚಿನ ಪ್ರಸರಣೆ ಉಳ್ಳ ಪತ್ರಿಕೆಯಯೊಂದನ್ನೇ ದೇಶದ್ರೋಹಿ ಪತ್ರಿಕೆ ಎಂದು ಬಿಂಬಿಸಲು ಪ್ರಯತ್ನಿಸುವುದು ಅತಿ ಕೆಟ್ಟ ಬೆಳವಣಿಗೆಗಳಲ್ಲಿ ಒಂದು. ಇನ್ನು ಪತ್ರಿಕೆಯ ಕಥೆ ಹೀಗಾಗದರೆ ಜನರ ವೈಯಕ್ತಿಕ ಕಥೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

This image has an empty alt attribute; its file name is image-7.png

ನಿನ್ನೆಯಷ್ಟೇ ಜೆಎನ್ ಯು ವಿಶ್ವವಿದ್ಯಾಲಯದ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ ಖ್ಯಾತ ಬಾಲಿವುಟ್ ತಾರೆ ದೀಪಿಕಾ ಪಡುಕೋಣೆ ಅವರನ್ನೂ ಸಹ ಬಹಳ ಸುಲಭವಾಗಿ ದೇಶದ್ರೋಹಿ ಎಂದು ಕರೆಯುತ್ತಿರುವುದು ಹಾಸ್ಯಾಸ್ಪದವಾದ ಸಂಗತಿಯಾಗಿದ್ದು ಭಾರತದಂತಹ ವೈವಿಧ್ಯಮಯವಾದ ಮತ್ತು ಪ್ರಜಾಪ್ರಭುತ್ವದ ರಾಷ್ಟ್ರದ ಮೌಲ್ಯಕ್ಕೆ ಮಾಡುವಂತಹ ಅವಮಾನಕರವಾದ ಸಂಗತಿಯಾಗಿದೆ. ಈ ಹಿಂದೆಯೂ ಕೂಡಾ ಅಮೀರ್ ಖಾನ್ ಅಂತಹ ಪ್ರತಿಭಾವಂತ ನಟರಿಗೂ ಸಹ ಇಂತಹದ್ದೇ ತೊಂದರೆ ಉಂಟಾಗಿತ್ತು.

“ಪ್ರಶ್ನಿಸುವುದು ದೇಶದ್ರೋಹವಲ್ಲ”

ತಾನೇ ನೀಡಿದ ಭರವಸೆಗಳನ್ನು ಈಡೇರಿಸಲು ಬಹುಮಟ್ಟಿಗೆ ವಿಫಲವಾಗಿರುವ ಸರ್ಕಾರವೊಂದನ್ನು ಪ್ರಶ್ನಿಸುವುದು, ರಚನಾತ್ಮಕವಾಗಿ ವಿಮರ್ಶಿಸುವುದು ಯಾವುದೇ ಕಾರಣಕ್ಕೂ ಸಹ ದೇಶದ್ರೋಹವಲ್ಲ ಬದಲಿಗೆ ದೇಶಪ್ರೇಮದ ಕೆಲಸವಾಗಿದೆ. ಏಕೆಂದರೆ ದೇಶದ ಮೇಲಿನ ಪ್ರೇಮದ ಕಾರಣಕ್ಕಾಗಿಯೇ ದೇಶದ ಸ್ಥಿತಿಯು ಹದಗೆಡುತ್ತಿದ್ದಾಗ ಎಚ್ಚರಿಸುವ ಕೆಲಸವನ್ನು ಮಾಡಲಾಗುತ್ತದೆ ಮತ್ತು ಅದು ನಿಜವಾದ ಭಾರತೀಯನೊಬ್ಬನ ಕರ್ತವ್ಯವೂ ಕೂಡಾ.

Image result for jnu fight

ಹೀಗಾಗಿ ಸರ್ಕಾರವೊಂದರ ರಚನಾತ್ಮಕ ಟೀಕೆಯು ದೇಶದ್ರೋಹವಲ್ಲ ಬದಲಿಗೆ ನಿಜವಾದ ದೇಶಪ್ರೇಮದ ಕೆಲಸ ಎಂಬುದನ್ನು   ಯಾವುದೇ ಆಡಳಿತ ಪಕ್ಷವೊಂದರ ಬೆಂಬಲಿಗರು ಅರ್ಥ ಮಾಡಿಕೊಂಡು ವರ್ತಿಸಬೇಕು. ಹಾಗಲ್ಲದೇ ದೇಶವು ಅಭಿವೃದ್ಧಿಯಲ್ಲಿ ಹಿಂದೆ ಹೋಗುತ್ತಿರುವಾಗಲೂ “ಇಲ್ಲಿ ಎಲ್ಲವೂ ಸರಿಯಿದೆ” ಎಂದು ಯಾರನ್ನೋ ಮೆಚ್ಚಿಸಲು ಹೇಳಿದರೆ ಅದು ಯಾವ ಕಾರಣಕ್ಕೂ ದೇಶಪ್ರೇಮ ಅನ್ನಿಸಿಕೊಳ್ಳುವುದಿಲ್ಲ ಎಂಬುದನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿರುವ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಮತ್ತು ದೇಶ ಮೊದಲು ರಾಜಕೀಯ ಪಕ್ಷಗಳು ನಂತರ ಎಂಬ ಸತ್ಯವನ್ನು ಮರೆಯದೇ ಅರಿಯಬೇಕು.

Please follow and like us:

Leave a Reply

Your email address will not be published. Required fields are marked *