ಸಿಮೊನ್ ದಿ ಬೋವಾ ಅವರ “ಸೆಕೆಂಡ್ ಸೆಕ್ಸ್” ಹೇಳುವ ಗಂಡು ಭಾಷೆ ಮತ್ತು ಮಹಿಳೆ !

ವೈಚಾರಿಕತೆ ಸಾಹಿತ್ಯ

“ಸಿಮೊನ್ ದಿ ಬೋವಾ ‘ಅವರ “ಸೆಕೆಂಡ್ ಸೆಕ್ಸ್ “ಎಂಬ ಕೃತಿಯಲ್ಲಿ ,ಭಾಷೆಯು ಪುರುಷ ನಿರ್ಮಿತವಾಗಿದೆ ಎಂಬುದನ್ನು ಸಮರ್ಥವಾಗಿ ಪ್ರತಿಪಾದಿಸುತ್ತಾರೆ. ಭಾಷೆಯ ಸ್ವರೂಪವನ್ನು ಗಮನಿಸಿದಲ್ಲಿ ಅವರ ಅಭಿಪ್ರಾಯ, ಸತ್ಯಕ್ಕೆ ಹತ್ತಿರವಾದುದು ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಭಾಷೆಯಲ್ಲಿ ಹೆಣ್ಣನ್ನು ಮಾತ್ರ ಅತ್ಯಂತ ಕೀಳಾಗಿ ಕಾಣುವ, ತಿರಸ್ಕಾರ ಧ್ವನಿ  ಕಾಣುತ್ತೇವೆ.

Related image

 ವಿಧವೆಯರಾದ ಹೆಣ್ಣುಮಕ್ಕಳಿಗೆ ಸಮಾನಾರ್ಥಕವಾಗಿ ಬಳಸಲಾಗುವ ರಂಡೆ ,ಮುಂಡೆಯಂತಹ ಪದಗಳು ತಿರಸ್ಕೃತ ನಿಂದನೆಯನ್ನು ಹಾಗೂ ಹೆಣ್ಣನ್ನು ಅತ್ಯಂತ ಕೀಳಾಗಿ ಕಾಣುವ ಪುರುಷ ಪ್ರಧಾನ ಸಮಾಜದ ದೃಷ್ಟಿಕೋನವನ್ನು ಧ್ವನಿಸುತ್ತದೆ. ಹೆಂಡತಿಯನ್ನು ಕಳೆದುಕೊಂಡ ಪುರುಷರನ್ನು ಸೂಚಿಸುವ ‘ವಿದುರ’ ಪದವು ನಿಂದನಾ ಪದವಾಗಿ ಎಂದಿಗೂ ಬಳಕೆಯಾದ ಉದಾಹರಣೆಗಳಿಲ್ಲ. ಅದು ಕೇವಲ ಒಂದು ಸ್ಥಿತಿಯನ್ನು ಸೂಚಿಸುತ್ತದೆ ಅಷ್ಟೇ .

ಲೈಂಗಿಕ ಸ್ವೇಚ್ಛಾಚಾರದಿಂದ ಪ್ರವರ್ತಿಸುವ  ಹೆಣ್ಣು ಮಕ್ಕಳನ್ನು ,ಗಂಡುಮಕ್ಕಳ ಸ್ವೇಚ್ಛಾಚಾರದಂತೆ ಲಘುವಾಗಿಯಾಗಲೀ ಕ್ಷಮ್ಯವಾಗಿಯೇ ಆಗಲೀ  ಕಾಣಲಾಗುವುದಿಲ್ಲ. ಅವರು ಜನರ ಬಾಯಲ್ಲಿ ,ಸೂಳೆ,ಹಾದರಗಿತ್ತಿ ಮೊದಲಾದ ನಿಂದನಾ ಪದಗಳಿಂದ ಕರೆಯಲ್ಪಡುತ್ತಾರೆ. , ನಮ್ಮ ಸಮಾಜದಲ್ಲಿ ಹೆಣ್ಣಿನ ಶೀಲ- ಚಾರಿತ್ರ್ಯಗಳಿಗೆ, ಪುರುಷರ ಶೀಲ- ಚಾರಿತ್ರ್ಯಕ್ಕಿಂತಲೂ ,ಅತ್ಯುತ್ಕೃಷ್ಟ ಸ್ಥಾನವನ್ನು ಪಾವಿತ್ರ್ಯದ ಶಿಲುಬೆಯನ್ನು ತೊಡಿಸಿಬಿಟ್ಟಿದ್ದಾರೆ. ಆ ಶಿಲುಬೆಯಲ್ಲಿ ಅವಳ ರಕ್ತ ಸುರಿವ ದೇಹ, ಯಮಯಾತನೆಯನ್ನು ಅನುಭವಿಸುತ್ತಿರುವ ಮನ ಶತಮಾನಗಳಿಂದ ನೇತಾಡುತ್ತಿದೆ ಸಮಾಜದಲ್ಲಿ   ಸಮಾನತೆಯ ಆಶಯಗಳಿಲ್ಲದೆ .

Image result for women character demoralising absurd

ನಮ್ಮ ಸಮಾಜದಲ್ಲಿ ಯಾವುದೇ ಹೆಣ್ಣನ್ನು ಚಾರಿತ್ರ್ಯವಧೆ ಮಾಡುವ ಮೂಲಕ ಅವಳನ್ನು ನೈತಿಕವಾಗಿ ಮುಗಿಸುವುದು ಇಂತಹ ಪದಪ್ರಯೋಗದಿಂದ ಸುಲಭಸಾಧ್ಯ. ಅವಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಇಂತಹ ಪ್ರಯೋಗಗಳು ಅಷ್ಟೇ ಸಾಕು ,ಅವಳನ್ನು ಕೊಲ್ಲಬೇಕಾಗಿಲ್ಲ.ಆದರೆ ಲೈಂಗಿಕ ಸ್ವೇಚ್ಛಾರದಲಿ ಮುಳುಗಿರುವ ಪುರುಷನನ್ನು ನಿಂದಿಸುವಸುವಂತಹ, ಹೀಗಳೆಯುವ ಅಂತಹ ಪದಗಳು ನಮ್ಮ ಭಾಷಾ ಬಳಕೆಯ  ಪರಿಸರ ವಲಯ ದಲ್ಲಿ ಕಾಣದಿರುವುದು, ಭಾಷೆ ನಿಜಕ್ಕೂ ಪುರುಷ ನಿರ್ಮಿತ ಎಂಬುದನ್ನು ಒಡೆದು ತೋರಿಸುತ್ತದೆ ಹೆಣ್ಣಿನ   ಹಾದರವನ್ನು ಗುರುತಿಸುವ ಹಾಗೂ ನಿಂದಿಸುವ ಭಾಷೆ, ಏಕಕಾಲದಲ್ಲಿ ಅಂತಹುದೇ ಅಂತಹುದೇ ಕಾರ್ಯದಲ್ಲಿ ತೊಡಗಿರುವ ಪುರುಷನನ್ನು ಗುರುತಿಸದೆ ನಿಂದಿಸದೆ ಹೋಗುವುದು, ಭಾಷೆಯ ಮೇಲಿನ ಪುರುಷರ ಸ್ವಾಮ್ಯವನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.

 ಪುರುಷರನ್ನು ನಿಂದಿಸಲು ಹೀಯಾಳಿಸಲು ಬಳಸಲಾಗುವ ಪದಗಳು ಪರೋಕ್ಷವಾಗಿ ಅವನಿಗೆ ಸಂಬಂಧಿಸಿದ ಸ್ತ್ರೀಯರನ್ನು ಕುರಿತದ್ದೇ ಆಗಿರುತ್ತದೆ .ಅವನ ತಾಯಿಯನ್ನು ಹೆಂಡತಿಯನ್ನು ಸಹೋದರಿಯನ್ನು ನಿಂದಿಸುವ ಪದಪ್ರಯೋಗಗಳನ್ನು ನಾವು ಕಾಣುತ್ತೇವೆ .ಈ ಮೇಲಿನ ಎಲ್ಲಾ ನಿದರ್ಶನಗಳನ್ನು ಗಮನಿಸಿದಾಗ ಭಾಷೆಯಲ್ಲಿಯೂ ಲಿಂಗತಾರತಮ್ಯದ ದಟ್ಟ ಛಾಯೆ ಇದೆ ಎಂಬುದನ್ನು ಮನಗಾಣಬಹುದು ಭಾಷೆಯಲ್ಲಿಯೂ ಸ್ತ್ರೀಯರನ್ನು ಪುರುಷನಿಗೆ  ಸಮಾನವಾದ  ಸ್ಥಾನಮಾನಗಳನ್ನು ಉಳ್ಳವಳಂತೆ ಗೌರವಿಸುವ ಮನೋಭಾವ ವ್ಯಕ್ತವಾಗಿಲ್ಲ.

Related image

 ಹೀಗೆ ಪುರುಷ ನಿರ್ಮಿತ ಸಾಮಾಜಿಕ ,ಸಾಂಸ್ಕೃತಿಕ ವ್ಯವಸ್ಥೆಯಿಂದ ಸ್ತ್ರೀಯರು ಸಂಪೂರ್ಣವಾಗಿ ಸಮಾನತೆಗೆ ಎರವಾಗಿ ದ್ವಿತೀಯ ದರ್ಜೆಗೆ  ತಳ್ಳಲ್ಪಟ್ಟಿದ್ದಾರೆ .ಸ್ತ್ರೀ ಸಂವೇದನಾ ರಹಿತವಾದ ಭಾಷೆಯನ್ನು ಮಹಿಳೆಯರು ಸಮರ್ಥವಾಗಿ ತಮ್ಮ ಸೃಜನಶೀಲ ಅಭಿವ್ಯಕ್ತಿಗೆ ಹೊಸ ಭಿತ್ತಿಯನ್ನಾಗಿಸಿಕೊಂಡು, ಭಾಷೆಯನ್ನು ಕಟ್ಟುವ ಕೆಲಸ ನಿರಂತರವಾಗಿ ಜರುಗಬೇಕು. ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಇಂತಹ ಪದಗಳನ್ನು ಪ್ರಯೋಗಿಸಿ ತಮ್ಮ ಪುರುಷ ಅಹಂಕಾರವನ್ನು ಮೆರೆಯುವ ಸಮಾಜದ ಹುಂಬತನ ನಾಶವಾಗಬೇಕು.

ಲೇಖಕರು : ಶಿಲ್ಪ.ಬಿ.ಎಂ

(ಸಹಾಯಕ ಪ್ರಾಧ್ಯಾಪಕರು)

Please follow and like us:

Leave a Reply

Your email address will not be published. Required fields are marked *