ಅಂತಃಕರಣವಿಲ್ಲದ ವೈದ್ಯರು, ಅವಿವೇಕಿ ಕರ್ನಾಟಕ ರಕ್ಷಣಾ ವೇದಿಕೆ – ಮತ್ತಷ್ಟು ಬಿಗಡಾಯಿಸಿದ ಸಮಸ್ಯೆ !

ಬೆಂಗಳೂರು ರಾಜಕೀಯ

ಮಿಂಟೋ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ದೃಷ್ಟಿ ಕಳೆದುಕೊಂಡಿರುವ ಹಲವು ಮಂದಿ ವಯಸ್ಕರ ಪರವಾಗಿ ರಾಜ್ಯದ ಹಲವಡೆಗಳಿಂದ ದೊಡ್ಡ ಪ್ರತಿರೋಧದ ದನಿಯು ಮೊಳಗಿದೆ. ಅತ್ತ ಕರವೇ ಕಾರ್ಯಕರ್ತರ ದಾಳಿಗೆ ಕೋಪೋದ್ರಿಕ್ತರಾಗಿರುವ ಮಿಂಟೋ ಆಸ್ಪತ್ರೆಯ ವೈದ್ಯರೂ ಸಹ ಧರಣಿಯನ್ನು ಮುಂದುವರೆಸಿದ್ದು ಆಸ್ಪತ್ರೆಯಲ್ಲಿ ರೋಗಿಗಳ ಪರಿಸ್ಥಿತಿಯನ್ನು ಕೇಳದಂತೆ ಆಗಿದೆ.

ಅಶ್ವಿನಿ ಗೌಡ & ಸಂಗಡಿಗರಿಂದ ಅವಿವೇಕದ ವರ್ತನೆ.

ಕಣ್ಣು ಕಳೆದುಕೊಂಡವರಿಗೆ ನ್ಯಾಯ ಕೊಡಿಸುವ  ಹೆಸರಿನಲ್ಲಿ ಮಿಂಟೋ ಆಸ್ಪತ್ರೆಗೆ ಹೋಗಿದ್ದ ಅಶ್ವಿನಿ ಗೌಡ & ಕರವೇ ಸಂಸ್ಥೆಯ ಇತರೆ ಸದಸ್ಯರು ಅಲ್ಲಿನ ವೈದ್ಯಕೀಯ ಸಿಬ್ಬಂದಿಯ ಜೊತೆಯಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಪ್ರವರ್ತಿಸಿದ್ದು ಹಲ್ಲೆಯ ನಡವಳಿಕೆಯನ್ನು ತೋರಿದ್ದಾರೆ. ಅದರಲ್ಲೂ ಅಶ್ವಿನಿ ಗೌಡ ಅವರ ಜೊತೆಯಲ್ಲಿದ್ದ ಕರವೇ ಕಾರ್ಯಕರ್ತೆಯೊಬ್ಬರು ರೌಡಿಯಂತೆ ವರ್ತಿಸಿದ್ದು ತೀರಾ ಖಂಡನೀಯ ವರ್ತನೆಯಾಗಿದೆ.

ಆಸ್ಪತ್ರೆಯ ವಾತಾವರಣದಲ್ಲಿ ಶಾಂತವಾಗಿ ವ್ಯವಹರಿಸಬೇಕು ಎಂಬ ಜ್ಞಾನವಿಲ್ಲದ ಅಶ್ವಿನಿ ಅವರು ಒಬ್ಬರಿಗೆ ನ್ಯಾಯಕೊಡಿಸುವ ನೆಪದಲ್ಲಿ ವಿವೇಕವನ್ನು ಕಳೆದುಕೊಂಡು ವರ್ತಿಸಿದ್ದು ನಿಜಕ್ಕೂ ಉತ್ತಮ ನಡವಳಿಕೆಯಲ್ಲ.

Image may contain: 2 people

ಎಲ್ಲಕ್ಕಿಂತ ಮುಖ್ಯವಾಗಿ ವೈದ್ಯ ಸೇವೆಗೆ ದೇಶ,ಭಾಷೆ & ಕಾಲದ ಹಂಗಿಲ್ಲ. ಹೀಗಾಗಿ ವೈದ್ಯರನ್ನು ಇಂತಹದ್ದೇ ಭಾಷೆ ಮಾತನಾಡಬೇಕು ಎಂದು ಬಲವಂತ ಹೇರುವುದು ತಪ್ಪಾದ ನಡವಳಿಕೆ. ಈ ವಿಷಯದಲ್ಲಿ ಕನ್ನಡಪರ ಮನಸ್ಸುಗಳು ಇಂತಹ ಮಾನವೀಯ ಸೂಕ್ಷ್ಮಗಳನ್ನು ಮರೆತು ವರ್ತಿಸಿದೆ.

ವೃತ್ತಿ ಧರ್ಮ ಮರೆತು ವರ್ತಿಸುತ್ತಿರುವ ವೈದ್ಯರು !

ಇನ್ನು ಅರ್ಧ ಕಾಣುತ್ತಿದ್ದ ಕಣ್ಣನ್ನು ಪೂರ್ತಿ ಕಾಣದಂತೆ ಮಾಡಿರುವ ವೈದ್ಯರ ಬೇಜವಾಬ್ದಾರಿತನಕ್ಕೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕಿದೆ. ವೈದ್ಯೋ ನಾರಾಯಣೇ ಹರಿ ಎಂದು ನಂಬಿಕೆಯಿಟ್ಟು ಆಸ್ಪತ್ರೆಗೆ ಬರುವ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ವೈದ್ಯರ ಬೇಜವಾಬ್ದಾರಿ ನಡವಳಿಕೆ ಯಾವ ರೀತಿಯಲ್ಲೂ ಸಹ ಸಲ್ಲದು.

ಅಲ್ಲದೇ ಯಾರೋ ಸಂಘಟನೆಯವರು ಮಾಡಿದ ತಪ್ಪಿಗೆ ಬಡ ರೋಗಿಗಳಿಗೆ ಚಿಕಿತ್ಸೆ ನೀಡದೇ ಪ್ರತಿಭಟನೆಯಲ್ಲಿ ಮುಳುಗಿರುವುದರಿಂದ ರೋಗಿಗಳಿಗೆ ನಿಜಕ್ಕೂ ತೊಂದರೆಯಾಗುತ್ತಿದ್ದು, ಈ ವಿಷಯದಲ್ಲಿ ವೈದ್ಯರ ಸಮೂಹವು ತಮ್ಮ ವೃತ್ತಿ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಜನರನ್ನು ಕಾಪಾಡಬೇಕೆಂಬ ಉದ್ದೇಶಕ್ಕೆ ಶುರುವಾದ ಕರ್ನಾಟಕ ರಕ್ಷಣಾ ವೇದಿಕೆಯವರ ಪ್ರತಿಭಟನೆಯು ಅವಿವೇಕದ ಮಾರ್ಗವನ್ನು ಹಿಡಿದ ಕಾರಣ ಇಂದು ಅವರ ಮೂಲ ಉದ್ದೇಶ ವಿಫಲಗೊಂಡಿದ್ದು ಈ ಬಗ್ಗೆ ಅವರು ನಿಜಕ್ಕೂ ಯೋಚಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯು ಮೂಡಿದೆ.

Please follow and like us:

Leave a Reply

Your email address will not be published. Required fields are marked *