ನಿರ್ಮಾಪಕರ ನೆಚ್ಚಿನ ಸಿನಿಮಾ ಕೆಜಿಎಫ್ – ಹಾಗೂ ಅದರ ಸುತ್ತ

ಚಿತ್ರ ವಿಮರ್ಶೆ ಸಿನಿಮಾ ಸ್ಯಾಂಡಲ್ ವುಡ್

ಭಾಷೆಯ ಅಭಿಮಾನದ ಆಧಾರದ ಮೇಲೆ ಚಿತ್ರ ನೋಡಲು ಅಭಿಮಾನಿಗಳು ಬೇಕೇ ಬೇಕು ಎಂಬ ಮಾತಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಆದರೆ  ಚಿತ್ರ ಮುಗಿದ ಮೇಲೆ ಅವರು ಆ ಚಿತ್ರದಿಂದ ಅವರು ಏನೆಲ್ಲಾ ಒಳ್ಳೆಯದನ್ನು ಕಲಿತು ಹೋಗಬೇಕೆಂಬುದು ಅಷ್ಟೊಂದು ಯಾರಿಗೆ ಮುಖ್ಯವಾದಂತಿಲ್ಲ. ಹೀಗಾಗಿಯೇ ಮತ್ತೆ ಮತ್ತೆ ಕೆಜಿಎಫ್ ನಂತಹ ಸಾಲು ಸಾಲು ಚಿತ್ರಗಳನ್ನು ನೋಡುವ ಸೌರ್ಭಾಗ್ಯ (ದೌ) ನಮ್ಮ ಕನ್ನಡದ ಜನರಿಗೆ ದಕ್ಕಿದೆ.

ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ ಇಡೀ ಭಾರತವೇ ಕನ್ನಡ ಚಿತ್ರೋದ್ಯಮದ ಕಡೆಗೆ ತಿರುಗಿ ನೋಡುವಂತೆ ಮಾಡುತ್ತಿರುವ ಚಿತ್ರ ಕೆ.ಜಿ.ಎಫ್ ಎಂದು ಹೇಳಲಾಗುತ್ತಿದೆ. ಆದರೂ ಇದು ಕೆಲವರಿಗೆ ಇಷ್ಟವಾಗಿದ್ದರೆ ಇನ್ನು ಕೆಲವರಿಗೆ ಇಷ್ಟವಾಗಿಲ್ಲ. ಇದು ಎಲ್ಲ ಚಿತ್ರಗಳ ಮಟ್ಟಿಗೆ ಸಹಜವಾದ ಸಂಗತಿಯಾಗಿದೆ. ಆದರೆ ಈ ಇಷ್ಟ ಕಷ್ಟಗಳನ್ನು ಬದಿಗಿಟ್ಟು ನೋಡುವುದಾದರೆ ಕೆಳಗಿನ ಒಂದಷ್ಟು ಅಂಶಗಳನ್ನೂ ಸಹ ನಮ್ಮ ಪ್ರೇಕ್ಷಕರೂ, ಸಿನಿಮಾ ನಿರ್ಮಾಪಕ, ನಿರ್ದೇಶಕರು ಗಮನಿಸ ಬೇಕಾಗುತ್ತದೆ.

ಸಿನಿಮಾ ಎಂಬುದು ಜನಪ್ರಿಯ ಸಂಸ್ಕೃತಿ ಎಂದು ಹೇಳುತ್ತಾರೆ (ಪಾಪ್ಯುಲರ್ ಕಲ್ಚರ್ ). ಜನಪ್ರಿಯ ಸಂಸ್ಕೃತಿ ಎಂದರೆ ಜನರು ಇಷ್ಟಪಡುವಂತದ್ದಾಗಿದ್ದರೂ ಸಹ ಇದಕ್ಕೆ ಈ ಹೆಸರು ಬಂದ ಕಾಲ ಹಳೆಯದೇ ಆಗಿದೆ.    ಹಲವಾರು ಹಿರಿಯ ಕಲಾವಿದರು, ಚಿತ್ರ ಸಾಹಿತಿಗಳು ಮತ್ತು ತಂತ್ರಜ್ಞರು ಒಂದು ತಲೆಮಾರನ್ನೇ ಪ್ರಭಾವಿಸುವಂತಹ ಮತ್ತು ಶಾಶ್ವತವಾಗಿ ಉಳಿಯುವಂತಹ ಚಿತ್ರಗಳನ್ನು ತಯಾರುಮಾಡಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಈಗಾಗಲೇ ಅಂತಹ ಅದ್ಭುತವಾದ ಚಿತ್ರಗಳ ಮಾದರಿ ಇದೆ ಎಂದು ಎಲ್ಲರಿಗೂ ತಿಳಿದ ಅಂಶವಾಗಿದೆ.

ಇತ್ತೀಚಿನ ಚಿತ್ರಗಳನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಆದರೂ ಭಾಷೆಯ ಅಭಿಮಾನ ವೆಂದರೇನು ಎಂದು ತಿಳಿಯದ ನಮ್ಮ ಅತ್ಯುಗ್ರ ಕನ್ನಡ ಭಾಷಾ ಅಭಿಮಾನಿಗಳ ಕಾಟಕ್ಕೆ ಬೇಸತ್ತು ಹಾಗೂ ಏನಾದರೂ ಹೊಸದನ್ನು ಮಾಡಿರಬಹುದೆಂಬ ಕುತೂಹಲದ ನೂರಾರು ರೂಪಾಯಿಗಳನ್ನು ಕೊಟ್ಟು ಸಿನಿಮಾ ನೋಡುವುದು ನಂತರ ಬೈದುಕೊಂಡು ಬರುವುದು ಮತ್ತು ಅಪರೂಪಕ್ಕೊಮ್ಮೆ ಭಲೆ ಭಲೆ ಎಂದುಕೊಂಡು ಬರುವುದು ಸರ್ವೇ ಸಾಮಾನ್ಯವಾದ ಸಂಗತಿಯಾಗಿದೆ.

ಇದೇ ತರಹದ ನಿರೀಕ್ಷೆಯನ್ನು ಹುಟ್ಟಿಸಿದ್ದ ಕೆಜಿಎಫ್ ಸಿನಿಮಾವನ್ನು ನೋಡಿದಾಗಲೂ ಸಹ ಅದರ ಮೇಲೆ  ಮೇಲೆ ವಾವ್ ಎನ್ನುವಂತಹ ಭಾವನೆ ಬಂದಿಲ್ಲ. ಅರೆ ! ಯಾಕೆ ಬಂದಿಲ್ಲ ಎಂದರೆ, ಬಂದಿಲ್ಲ ಎಂದಷ್ಟೇ ಹೇಳಬಹುದು ಅಷ್ಟೇ. ಕಾರಣ ಮೊದಲಿಗೆ ಚಿತ್ರದಲ್ಲಿ ಹೊಸದೆನಿಸುವ ಕಥೆಯೇ ಇಲ್ಲ. ಬರೀ ಚಿತ್ರಕಥೆ, ಎಡಿಟಿಂಗ್ ಮತ್ತು ಅತ್ಯುತ್ತಮವಾದ ಸಿನಿಮಾಟೋಗ್ರಫಿಯನ್ನೇ ಪರಿಪೂರ್ಣ ಚಿತ್ರವೆಂದು ಒಪ್ಪಿಕೊಳ್ಳುವಂತೆ ಒತ್ತಾಯ ಹೇರಿದಂತೆ ಇದೆ. ಅಲ್ಲದೇ ಮತ್ತದೇ ಹೀರೋಯಿಸಂ ಬಿಲ್ಡಪ್ ನ ಸವಕಲು ಮಾದರಿಯನ್ನೇ ತೋರಿಸಿ ತೋರಿಸಿ ಹೊಸ ಪ್ರೇಕ್ಷಕನನ್ನು ಸಿನಿಮಾ ಅಂದರೆ ಇದೇ ಎಂದು ನಂಬುವಷ್ಟರ ಮಟ್ಟಿಗೆ ಮಾಡುತ್ತಿದ್ದಾರೆ.

ಹೊಡೆಯುವುದಕ್ಕೇ ಹುಟ್ಟಿರುವ ನಮ್ಮ ಹೀರೋಗಳು !

ಕೆಜಿಎಫ್ ಚಿತ್ರದಲ್ಲಿ ಯಶ್ ಅವರನ್ನು ಹೊಡೆಯಲೆಂದೇ ಹುಟ್ಟಿದ ನಾಯಕನಾಗಿ ತೋರಿಸಲಾಗಿದೆ.  ಹೀಗಾಗಿಯೇ ಯಶ್ ಅವರ ಪಾತ್ರವು ಚಿಕ್ಕ ವಯಸ್ಸಿನಿಂದಲೇ ಎದುರಾಳಿಗಳನ್ನು ಹೊಡೆಯಲು ಆರಂಭಿಸುತ್ತದೆ. ಮುಂಬೈನಲ್ಲೂ ಹೋಗಿ ಹೊಡೆಯುತ್ತದೆ, ನಂತರ ಬೆಂಗಳೂರಿನಲ್ಲೂ ಹೊಡೆಯುತ್ತದೆ, ಕೋಲಾರದ ಗಣಿಯಲ್ಲೂ ಹೋಗಿ ಹೊಡೆಯುತ್ತಲೇ ಇರುತ್ತದೆ. ಒಟ್ಟಿನಲ್ಲಿ ಯಶ್ ಅವರ ಪಾತ್ರವು ಈ ಸಿನಿಮಾದಲ್ಲಿ ಹೊಡೆಯುವುದಕ್ಕೇ ಹುಟ್ಟಿದ ಪಾತ್ರವೆಂದು ಹೇಳಿದರೆ ಅತಿಶಯೋಕ್ತಿಯೇನಲ್ಲ . ಇಲ್ಲಿ ಇನ್ನೂ ವಿಪರ್ಯಾಸವೆಂದರೆ “ ಸಾಯುವ ಮೊದಲು ನೀನು ದೊಡ್ಡ ಶ್ರೀಮಂತನಾಗಿ ಸಾಯಬೇಕು” ಎಂದು ತನ್ನ ತಾಯಿ ಹೇಳಿದ ಮಾತಿಗೆ ಪೂರಕವಾಗಿ ಉದ್ಯಮ ಜಗತ್ತಿಗೆ  ಪ್ರವೇಶ ಪಡೆಯಬೇಕಾದ ಯಶ್ ಸೀದಾ ಮಾಫಿಯಾ ಜಗತ್ತಿಗೆ ಪ್ರವೇಶ ಮಾಡುತ್ತಾನೆ.  ಯಾವ ತಾಯಿಗೂ ತನ್ನ ಮಗ ಮಾಫಿಯಾ ಮೂಲಕ ಶ್ರೀಮಂತನಾಗುವ ಆಸೆ ಇದ್ದಿರಲಾರದು ಎನಿಸುತ್ತದೆ. ಈ ಸಣ್ಣ ವಿಷಯ ನಿರ್ದೇಶಕರಿಗೆ ಹೊಳೆಯಬೇಕಿತ್ತು.

ಇನ್ನು ಸಿನಿಮಾ ಬಗ್ಗೆ ಹೇಳಬಹುದಾದ ಒಳ್ಳೆಯ ಅಂಶವೆಂದರೆ ಯಶ್ ಅವರ ಖಡಕ್ ಗೆಟಪ್, ಹಾಗೂ ಸಿನಿಮಾಟೋಗ್ರಫಿ. ಇವೆರಡು ಅಂಶಗಳೇ ಸಿನಿಮಾದಲ್ಲಿ ಪ್ರೇಕ್ಷಕನನ್ನು ಅಲ್ಲಿಯೇ ಕೂರಿಸಬಲ್ಲ ಅಂಶಗಳು. ಇನ್ನು ಫೈಟಿಂಗ್ ಸೀನ್ ಗಳಲ್ಲಿ ಎದುರಿಗಿರುವ ಹತ್ತಾರು ಶತ್ರುಗಳ ಕೈಯಲ್ಲಿ ಗನ್ ಗಳನ್ನು ನೀಡಿರುತ್ತಾರೆ. ಯಶ್ ಅವರು ಒಬ್ಬರನ್ನು ಹೊಡೆದು ಬೀಳಿಸಿದ ಮೇಲೆ ಇನ್ನೊಬ್ಬರು ಗನ್ ನಲ್ಲಿ ಹೊಡೆಯಲು ಬರುತ್ತಾರೆ. ಹೀಗಿದ್ದ ಮೇಲೆ ಅವರಿಗೆ ಅಷ್ಟೊಂದು ದುಡ್ಡು ಖರ್ಚು ಮಾಡಿ ಗನ್ ಬದಲು ಕತ್ತಿಯನ್ನೇ ಕೊಟ್ಟಿದ್ದರೆ  ಚೆನ್ನಾಗಿತ್ತು ಅಂತ ಅನಿಸುತ್ತದೆ.

ಕಳೆದ ವರ್ಷ ರಿಲೀಸ್ ಆಗಿದ್ದ ಮತ್ತು ಇದೇ ಮಾದರಿಯ ಸಿನಿಮಾಟೋಗ್ರಫಿಯನ್ನು ಹೊಂದಿದ್ದಂತಹ ಶಿವರಾಜ್ ಕುಮಾರ್ ಹಾಗೂ ಶ್ರೀ ಮುರಳಿ ಅಭಿನಯದ “ಮಫ್ತಿ” ಚಿತ್ರವು ಚೆನ್ನಾಗಿ ಮೂಡಿಬಂದಿತ್ತು. ಕನಿಷ್ಠ ಪಕ್ಷ ಪ್ರಶಾಂತ್ ನೀಲ್ ಅಷ್ಟಾದರೂ ಕಥೆಯ ಹಂದರವನ್ನು ಇಟ್ಟು ಚಿತ್ರವನ್ನು ಮಾಡಿದ್ದರೆ,  ಕೆಜಿಎಫ್ ಚಿತ್ರಕ್ಕೆ ಕೊಡುತ್ತಿರುವ ಬಿಲ್ಡಪ್ ಗೆ ಹೆಚ್ಚಿನ ಅರ್ಥ ಬರುತ್ತಿತ್ತು.

ಹೊಸ ತಲೆಮಾರಿಗೆ ಜ್ಞಾನವನ್ನು ನೀಡದ  ಪ್ರಚೋದನಾಕಾರೀ ಚಿತ್ರಗಳು.

ಈಗಾಗಲೇ ಓದಿನ ಹವ್ಯಾಸವನ್ನು ಕಳೆದುಕೊಂಡು ಸ್ಮಾರ್ಟ್ ಫೋನ್ ಗಳಲ್ಲಿ ಬಿಸಿಯಾಗಿರುವ ನಮ್ಮ ಹೊಸ ಪೀಳಿಗೆಯ ಯುವ ಜನತೆಗೆ ಕನಿಷ್ಠ ಪಕ್ಷ ವಿಷಯ ಜ್ಞಾನವನ್ನಾದರೂ ತಿಳಿಸುವ ಪ್ರಯತ್ನವನ್ನು ನಮ್ ಚಿತ್ರಗಳು ಮಾಡುತ್ತಿಲ್ಲ. ಬದಲಿಗೆ ಸುಲಭವಾಗಿ ಅನುಕರಿಸಬಹುದಾದ ತಲೆ ಬುಡವಿಲ್ಲದ ಫ್ಯಾನ್ ಫಾಲೋಯಿಂಗ್ ಡೈಲಾಗ್ ಗಳು, ಆ ಕ್ಷಣಕ್ಕೆ ಕೇಕೆ ಹೊಡೆದು ಮರೆಯುವ ಸದಭಿರುಚಿಯ ಸೊಗಡೇ ಇಲ್ಲದ ಡೈಲಾಗ್  ಗಳು, ಬೀದಿಯಲ್ಲಿ ಹೊಡೆದಾಡಲು ಬೇಕಾದ ಹಲವಾರು ಫೈಟಿಂಗ್ ಭಂಗಿಗಳು, ಹುಂಬತನ, ತರ್ಕವಿಲ್ಲದ ಹುಚ್ಚುತನ ಹಾಗೂ ಇತ್ಯಾದಿ ಅಂಶಗಳನ್ನು ಕಲಿಸಿ ಕಳಿಸುತ್ತಿವೆ.  ಯಾಕೆ ಹೀಗೆ ಎಂದು ಕೇಳಿದರೆ ಹಾಕಿದ್ದ ದುಡ್ಡು ಬರಬೇಕಲ್ಲ ಎಂದು ಮಾತನಾಡುತ್ತಾರೆ. ಹೌದು ಇಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಲು ಇವರು ಯಾಕೆ ದುಡ್ಡು ಹಾಕಬೇಕು ಎಂಬುದೂ ಇವರಿಗೆ ಕೇಳಬೇಕಿದೆ.  

ಓದು ಬರಹವನ್ನು ಬಹುತೇಕ ಮರೆತಿರುವ ಯುವ ಜನತೆಗೆ ಸತತವಾಗಿ ಇಂತಹ ಚಿತ್ರಗಳನ್ನು ತೋರಿಸುವ ಮೂಲಕ ಪೀಳಿಗೆಯ ಅಂತರವನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ. ಹೀಗಾಗಿ “ಪುಸ್ತಕದ ಬದನೆಕಾಯಲ್ಲ ನಿಜವಲ್ಲ” ಎಂದು ಹೇಳುವಷ್ಟರ ಮಟ್ಟಿನ ಧಾರ್ಷ್ಟ್ಯ ಬೆಳೆಯಲು ಸಾಧ್ಯವಾಗಿದ್ದು ಮುಗ್ದ ಕುತೂಹಲವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಉಗ್ರಂನ ಸಿನಿಮಾ ಸ್ವರೂಪದ ಹಲವು ಛಾಯೆಗಳನ್ನು ಇಲ್ಲಿ ಪ್ರಶಾಂತ್ ನೀಲ್ ಅವರು ಮುಂದುವರೆಸಿದ್ದರೂ ಸಹ ಯಶ್ ಅವರಿಗೆ ಇರುವ ಪ್ರಬಲ ಫ್ಯಾನ್ಸ್ ಫಾಲೋಯಿಂಗ್ ನಿಂದ ಚಿತ್ರ ಹಣದ ವಿಚಾರದಲ್ಲಿ ಗೆದ್ದಿದೆ. ಇನ್ನುಳಿದಂತೆ  ಅನಂತ್ ನಾಗ್ ಅವರ ನಟನೆ ಸಹಜವಾಗಿದ್ದು ಪ್ರೇಕ್ಷರನ್ನು ಇದ್ದಷ್ಟು ಹೊತ್ತು ಆಕರ್ಷಿಸುತ್ತದೆ. ಇನ್ನು ಹೀರೋಯಿಸಂ ಅಬ್ಬರದಲ್ಲಿ ಗಣಿ ಕೂಲಿಕಾರರ ನಿಜವಾದ ಕಷ್ಟವು ಕರುಣಾ ಸಾಗರದಲ್ಲಿ ಮುಳುಗಿ ಹೋಗಿ, ಶತ್ರು ಸಂಹಾರದ ಮೂಲಕ ಮತ್ತೆ ಹೀರೋಯಿಸಂನ  ಮೆರೆಯುತ್ತದೆ. ಇದನ್ನು ಸಿನಿಮಾ ಆರಂಭಗೊಂಡ ಕೆಲ ಹೊತ್ತಿನ ನಂತರ ಸುಲಭವಾಗಿಯೇ ಊಹಿಸಬಹುದೂ ಕೂಡಾ.

ಕೊನೆಯಲ್ಲಿ ಇದರ ಎರಡನೇ ಭಾಗ ಇನ್ನೂ ತೆರೆ ಕಾಣುವುದು ಬಾಕಿ ಇದೆ ಎಂದು ಅರಿತ ಪ್ರೇಕ್ಷಕರು ಇಲ್ಲಿಲ್ಲದ್ದು ಅಲ್ಲಿ ಸಿಗುತ್ತದೆ ಎಂಬ ನಂಬಿಕೆಯ ಆಧಾರದ ಮೇಲೆ, ಮಧ್ಯ ರಾತ್ರಿ ಕಿರಿ ಕಿರಿ ಮಾಡಲೆಂದೇ ಬರುವ ಆಟೋದವರಿಗೆ ಎರಡು ಮೂರು ಪಟ್ಟು ದುಡ್ಡು ಕೊಟ್ಟು ಮನೆಗೆ ಹೋಗಿ ಮಲಗುತ್ತಾರೆ.

ಇನ್ನಾದರೂ ಯುವಕರನ್ನು ಬದುಕಿನ ಆರೋಗ್ಯಪೂರ್ಣ ಅಭಿರುಚಿಗೆ ಮರಳಿಸುವಂತಹ, ಅವರಲ್ಲಿ ಸ್ವಲ್ಪವಾದರೂ ಜ್ಞಾನ ಹೆಚ್ಚಿಸುವಂತಹ ಮತ್ತು ಅವರಲ್ಲಿ ಕುತೂಹಲವನ್ನು ಉಳಿಸುವ ಚಿತ್ರಗಳು ಮೂಡಿಬರಲಿ ಎಂದು ಒಬ್ಬ ನೈಜ ಭಾಷಾಭಿಮಾನಿಯಾಗಿ ಮತ್ತು ಚಲನಚಿತ್ರಗಳ ವೀಕ್ಷಕನಾಗಿ ನಿರ್ಮಾಪಕ, ನಿರ್ದೇಶಕರಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತೇನೆ.

Please follow and like us:

Leave a Reply

Your email address will not be published. Required fields are marked *