ಭೀಕರ ಪ್ರವಾಹದಿಂದ ತತ್ತರಿಸಿದ ಕರ್ನಾಟಕ – ನೆರವಿಗೆ ಬಾರದ ಕೇಂದ್ರ ಮತ್ತು ರಾಜ್ಯ ಸರ್ಕಾರ !

ಜಿಲ್ಲಾ ಸುದ್ದಿ ರಾಜಕೀಯ ರಾಜ್ಯ ಸಂಸತ್

ಪ್ರವಾಹದ ಗತಿಯು ದಿನೇ ದಿನೇ ಹೆಚ್ಚಾಗುತ್ತಿದ್ದು ಉತ್ತರ ಕರ್ನಾಟಕದಿಂದ ಮೊದಲುಗೊಂಡು ದಕ್ಷಿಣ ಕರ್ನಾಟಕಕ್ಕೂ ಸಹ ಪ್ರವಾಹವು ಅಪ್ಪಳಿಸಿದ್ದು 16 ಜಿಲ್ಲೆಗಳ 88 ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.  ಈ ಪೈಕಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿಯೂ ಸಹ ಹೆಚ್ಚಾಗಿರುವ ಪ್ರವಾಹದಿಂದಾಗಿ ಚಿಕ್ಕಮಗಳೂರಿನ ಶೃಂಗೇರಿ ಮಠ, ಬಾಳೆಹೊನ್ನೂರು ಮುಳುಗಡೆಯಾಗಿದ್ದು ಜನ ಸಾಮಾನ್ಯರು ತೀವ್ರವಾದ ತೊಂದರೆಗೆ ಸಿಲುಕಿದ್ದಾರೆ.

ಹೆಚ್ಚಿನ ನೀರನ್ನು ಡ್ಯಾಂ ನಿಂದ ಬಿಡುಗಡೆ ಮಾಡುತ್ತಿರುವ ಕಾರಣದಿಂದಾಗಿ ಶಿವಮೊಗ್ಗ ನಗರದ ಕೆಲವು ಪ್ರದೇಶಗಳೂ ಸಹ ಜಲಾವೃತಗೊಂಡಿದ್ದು ಆಯಾ ಪ್ರದೇಶಗಳಲ್ಲಿ ಸ್ಥಳೀಯರೇ ಆಹಾರ ಕೇಂದ್ರಗಳನ್ನು ತೆರೆದು ಜನರಿಗೆ ಸಹಕರಿಸುತ್ತಿದ್ದಾರೆ.

ಇನ್ನು ಮೈಸೂರಿನ ಹುಣಸೂರು ತಾಲ್ಲೂಕಿನ ಲಕ್ಷ್ಮಣ ತೀರ್ಥ ನದಿಯು ಉಕ್ಕುತ್ತಿರುವ ಪರಿಣಾಮದಿಂದಾಗಿ ಹುಣಸೂರಿನ ಪ್ರದೇಶಗಳೂ ಸಹ ಮುಳುಗಡೆಯ ಭೀತಿಯನ್ನು ಎದುರಿಸುತ್ತಿದ್ದು ಅಗತ್ಯ ಪರಿಹಾರಗಳು ಇಲ್ಲದೇ ಜನರು ತೀವ್ರವಾಗಿ ಸಂಕಷ್ಟದಲ್ಲಿದ್ದಾರೆ.

ಇದಿಷ್ಟೇ ಅಲ್ಲದೇ ಉತ್ತರ ಕನ್ನಡದ ಬಹಳಷ್ಟು ಪ್ರದೇಶಗಳು ಬಹಳಷ್ಟು ಪ್ರಮಾಣದಲ್ಲಿ ಹಾನಿಗೆ ಒಳಗಾಗಿದ್ದು ಹಾಸನ, ಮಡಿಕೇರಿ , ದಕ್ಷಿಣ ಕನ್ನಡದ ಸ್ಥಳಗಳೂ ಸಹ ತೀವ್ರವಾದ ತೊಂದರೆಗೆ ಸಿಲುಕಿದೆ. ಸಕಲೇಶಪುರ, ಕುಶಾಲ ನಗರ, ವಿರಾಜಪೇಟೆ, ಕೊಡಗು ಭಾಗದ ಬಹಳಷ್ಟು ಸ್ಥಳಗಳು ತೊಂದರೆಗೆ ಸಿಲುಕಿದ್ದು ಸಹಾಯವನ್ನು ಎದುರು ನೋಡುತ್ತಾ ಕುಳಿತಿವೆ.

ನೆರವಿಗೆ ಬಾರದ ಕೇಂದ್ರ ಮತ್ತು ರಾಜ್ಯ ಸರ್ಕಾರ.

ಜಲ ಪ್ರಳಯದಿಂದಾಗ ಕರ್ನಾಟಕದ ಬಹಳಷ್ಟು ಪ್ರದೇಶಗಳು ತೀವ್ರ ತೊಂದರೆಯಲ್ಲಿದ್ದರೂ ಸಹ ಅಷ್ಟಾಗಿ ತಲೆಕೆಡಿಸಿಕೊಳ್ಳದ ಕರ್ನಾಟಕ ರಾಜ್ಯ ಸರ್ಕಾರವು ತನ್ನದೇ ಆದ ಸಂಕಷ್ಟದಲ್ಲಿದ್ದು ನಿರೀಕ್ಷಿತ ಪ್ರಮಾಣದಲ್ಲಿ ಜನರಿಗೆ ಪರಿಹಾರ ಕ್ರಮವನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಇನ್ನು ಸರ್ಕಾರವನ್ನು ರಚಿಸಿದ ಬಳಿಕ ಏಕಾಂಗಿ ಪ್ರದರ್ಶನವನ್ನು ಮುಂದುವರೆಸಿರುವ ಸಿಎಂ ಯಡಿಯೂರಪ್ಪನವರೂ ಸಹ ತಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದರೂ ಸಹ ಅದು ಏನೇನೂ ಸಾಕಾಗುತ್ತಿಲ್ಲ.

ಇನ್ನೂ ಸಚಿವ ಸಂಪುಟ ರಚನೆಯಾಗದೇ ಇರುವ ಕಾರಣದಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲವೆಂಬುದು ವಾಸ್ತವ ಸಂಗತಿಯಾಗಿದ್ದು ಒನ್ ಮ್ಯಾನ್ ಷೋ ನಡೆಸುತ್ತಿರುವ ಯಡಿಯೂರಪ್ಪನವರಿಂದಲೂ ಸಹ ಅಂತಹ ಪ್ರಯೋಜನವೇನೂ ಅಗುತ್ತಿಲ್ಲ.

ಇನ್ನು ಪರಿಹಾರಕ್ಕಾಗಿ 5000 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದ್ದಾಗಲೂ ಸಹ ಕೇವಲ 150 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಹೇಳಿರುವ ಕೇಂದ್ರ ಸರ್ಕಾರವು ಸಂತ್ರಸ್ತ ಜನರ ಬದುಕನ್ನು ನಿರ್ಮಿಸಲು ಮನಸ್ಸು ಮಾಡದೇ ಇರುವುದು ಮತ್ತು ಕೇವಲ ಭಾವನಾತ್ಮಕ ವಿಷಯಗಳಲ್ಲಿ ಮುಳುಗಿರುವುದು ನಾಚಿಕೆಗೇಡಿನ ವಿಷಯವಾಗಿದೆ.

ಸರ್ಕಾರದ ಮಟ್ಟದಲ್ಲಿ ಪ್ರವಾಹ ಸಂತ್ರಸ್ತರಿಗೆ ಅಗತ್ಯ ಪ್ರಮಾಣದಲ್ಲಿ ಸಹಾಯವು ದೊರೆಯದೇ ಇದ್ದರೂ ಸಹ ಹಲವಾರು ಜನರು ಮತ್ತು ಸಂಘ ಸಂಸ್ಥೆಗಳು ಉತ್ತರ ಕರ್ನಾಟಕ ಹಾಗೂ ಪ್ರವಾಹ ಸಂತ್ರಸ್ತರ ಸಂಕಷ್ಟಕ್ಕೆ ಧಾವಿಸಿದ್ದು ಪ್ರತಿದಿನವೂ ಸಹಾಯದ ಕಾರ್ಯವನ್ನು ಸ್ವಯಂ ಪ್ರೇರಿತರಾಗಿ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರವು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು ಈ ವೇಳೆ ಕನಿಷ್ಟ ಕೇಂದ್ರ ಸರ್ಕಾರವಾದರೂ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಲೇಬೇಕಾಗಿದೆ. ಇದಕ್ಕಾಗಿ ಅಗತ್ಯ ವಸ್ತುಗಳು, ಪರಿಹಾರ ಸಾಮಾಗ್ರಿ ಹಾಗೂ ಜನರನ್ನು ರಕ್ಷಿಸಲು ರಕ್ಷಣಾ ಪಡೆಗಳ ಸಹಕಾರ ಅಗತ್ಯವಾಗಿದ್ದು ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಜನತೆಗೆ ನಿಜಕ್ಕೂ ಅನುಕೂಲವಾಗಲಿದೆ.

Please follow and like us:

Leave a Reply

Your email address will not be published. Required fields are marked *