ಸರ್ವಧರ್ಮ ಸಮನ್ವಯದ ಸಂಗೀತಕ್ಕೆ ಇನ್ನೊಂದು ಹೆಸರೇ ಈ ಹರ್ಲಾಪುರ ಕುಟುಂಬ !

ಜಿಲ್ಲಾ ಸುದ್ದಿ ಬೆಂಗಳೂರು ರಾಜ್ಯ

ಧರ್ಮ ಕಲಹ ಮತ್ತು ಜಾತಿ ಶೋಷಣೆಯ ಕರಾಳ ಘಟನೆಗಳು ಮತ್ತೆ ಮತ್ತೆ ಮುನ್ನಲೆಗೆ ಬರುತ್ತಿರುವ  ಈ ವೇಳೆ ಇಂದಿಗೂ ಎಲ್ಲಾ ಧರ್ಮದ ಆಚರಣೆಗಳನ್ನು ಗೌರವಿಸುತ್ತಾ ಸುತ್ತಲ ಸಮಾಜದ ಜೊತೆಗೆ ಬಾಂಧವ್ಯದ ಬದುಕನ್ನು ಸಾಧಿಸಿರುವ ಶಿವಮೊಗ್ಗದ ಹೆಮ್ಮೆಯ ಹಿಂದೂಸ್ತಾನಿ ಕಲಾವಿದರಾದ ಉಸ್ತಾದ್ ಶ್ರೀ.ಹುಮಾಯೂನ್ ಹರ್ಲಾಪುರ್ ಅವರ ಕುಟುಂಬದ ಬದುಕಿನ ರೀತಿಯ ಕುರಿತಂತೆ ಪುಟ್ಟ ಬರಹ ಇದು.

ಶಿವಮೊಗ್ಗದಲ್ಲಿ ಈಗಾಗಲೇ ದಶಕಗಳಿಂದ ನೆಲೆಸಿರುವ ಹರ್ಲಾಪುರ್ ಅವರ ಕುಟಂಬದ ಮೂಲವು ಹುಬ್ಬಳ್ಳಿ ಸೀಮೆಯ ಹರ್ಲಾಪುರ. ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿಯವರ ಶಿಷ್ಯರಾದ ಹುಮಾಯೂನ್ ಹರ್ಲಾಪುರ್ ಅವರು ತಾವು ಕಲಿತ ಹಿಂದೂಸ್ಥಾನಿ ಸಂಗೀತ ವಿದ್ಯೆಯನ್ನು ಬಹುಕಾಲದಿಂದ ಶಿವಮೊಗ್ಗದ ಸಂಗೀತ ಕಲಿಕಾ ಆಸಕ್ತಿ ಉಳ್ಳವರಿಗೆ ಹೇಳಿಕೊಡುತ್ತಿದ್ದು ಬಹಳಷ್ಟು ಮಂದಿ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ.

ಇನ್ನು ಇವರ ಕುಟುಂಬವೇ ಸಂಗೀತ ಸಾಧನೆಗೆ ಹೆಸರಾಗಿದ್ದು ಇವರ ಮಕ್ಕಳಾದ ಕು.ನೌಷಾದ್ ಹರ್ಲಾಪುರ್ ಹಾಗೂ ನಿಶಾದ್ ಹರ್ಲಾಪುರ್ ಅವರೂ ಸಹ ಅತ್ಯುತ್ತಮ ಗಾಯಕರಾಗಿ ಹಿಂದೂಸ್ಥಾನಿ ಸಂಗೀತದಲ್ಲಿ ತಮ್ಮ ಸಾಧನೆಯನ್ನು ಮುಂದುವರೆಸಿದ್ದಾರೆ. ಇನ್ನು ಹುಮಾಯೂನ್ ಹರ್ಲಾಪುರ್ ಅವರ ಮಡದಿ ದಿಲ್ ಶಾದ್ ಅವರೂ ಸಹ ಕುಟುಂಬದ ಸಾಧನೆಗೆ ಹೆಗಲಾಗಿದ್ದಾರೆ.

ಇದೆಲ್ಲಾ ಇವರ ಬದುಕಿನ ಒಂದು ಪ್ರಮುಖ ಮಾರ್ಗವಾದರೆ ಇವರ ಜೀವನ ಶೈಲಿಯು ಇವರ ಕುಟುಂಬವು ಬೇರೆಲ್ಲರಿಗಿಂತ ವಿಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ. ಈ ಸದ್ಯ ನಮ್ಮ ಸಮಾಜದಲ್ಲಿ ಪ್ರಚಲಿತದಲ್ಲಿರುವ ಎಲ್ಲಾ ಧಾರ್ಮಿಕ ಹಬ್ಬ & ಆಚರಣೆಗಳನ್ನು ಅತ್ಯಂತ ಗೌರವಪೂರ್ಣಕವಾಗಿ ಆಚರಿಸುವ ಇವರು ಆ ದಿನ  ತಮ್ಮ ಸಂಗೀತ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಸುತ್ತ ಮುತ್ತಲ ಬಂಧುಗಳನ್ನು ಆಹ್ವಾನಿಸಿ ಎಲ್ಲರೊಂದಿಗೆ ಮುಕ್ತವಾಗಿ ಬೆರೆತು ಆಚರಣೆಗಳನ್ನು ಮಾಡುತ್ತಾರೆ.

ರಂಜಾನಿನ ಖೀರಿನಿಂದ ಹಿಡಿದು ಗೌರಿ ಗಣೇಶ, ದಸರಾ, ದೀಪಾವಳಿ ಮತ್ತು ಯುಗಾದಿಯ ಹೋಳಿಗೆ ತುಪ್ಪದವರೆಗೆ ಇವರ ಆಚರಣೆಯು ಎಲ್ಲರನ್ನೂ ಒಳಗೊಂಡು ಅನ್ಯೋನ್ಯತೆಯಿಂದ ಕೂಡಿರುತ್ತದೆ. ಕ್ರಿಸ್ ಮಸ್ ಹಬ್ಬವನ್ನೂ ಸಹ ಅಷ್ಟೇ ಆಸ್ಥೆಯಿಂದ ಆಚರಿಸುವ ಇವರು ತಮ್ಮ ಮನೆಯನ್ನು ಧರ್ಮ ಸಾಮರಸ್ಯದ ಗೂಡಾಗೇ ಉಳಿಸಿಕೊಂಡು ಧರ್ಮದ ವಿಷಯದಲ್ಲಿ ಗಲಭೆಯೆಬ್ಬಿಸುವ ಸಾವಿರಾರು ಅವಿವೇಕಿಗಳಿಗೆ ಸರಿಯಾದ ಮಾರ್ಗ ತೋರುವಂತೆ ಬದುಕುತ್ತಿದ್ದಾರೆ.

ರಾಷ್ಟ್ರೀಯ ಹಬ್ಬಗಳು ಮನೆಹಬ್ಬಕ್ಕಿಂತ ಮಿಗಿಲು !

ಹರ್ಲಾಪುರ್ ಕುಟುಂಬದವರು ಭಾರತದ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳನ್ನೂ ಸಹ ಮನೆಯ ಹಬ್ಬದ ಹಾಗೆಯೇ ಆಚರಿಸುತ್ತಾರೆ. ಇಂತಹ ವಿಶೇಷ ದಿನಗಳಂದು ಅವರು ಸಿಹಿ ತಿಂಡಿಗಳನ್ನು ತಯಾರಿಸಿ ಮನೆಗೆ ಬಂದವರಿಗೆ ನೀಡುತ್ತಾರೆ. ಈ ಪ್ರವೃತ್ತಿಯನ್ನು ಬಹು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಇವರು ಈಗಲೂ ಈ ಕಾರ್ಯವನ್ನು ಆಸ್ಥೆವಹಿಸಿ ಮಾಡುತ್ತಾರೆ.

ಕೃತಿಯಿಲ್ಲದೇ ಬರೀ ಮಾತಿನಲ್ಲಿ ದೇಶಪ್ರೇಮವನ್ನು ತೋರ್ಪಡಿಸುತ್ತಿರುವ ಈಗಿನ ಯುವ ಸಮೂಹಕ್ಕೆ ಮಾದರಿಯಾಗಬಹುದಾದ ಸಂಗತಿ ಇದಾಗಿದ್ದು ಅವರ ಇಂತಹಾ ಬದುಕಿನ ಶೈಲಿಯನ್ನು ಹತ್ತಿರದಿಂದ ಕಂಡರೆ ಹೆಚ್ಚಿನ ವಿಶ್ವಾಸ ಮೂಡಲೂ ಸಾಧ್ಯವಿದೆ.

ಪುಟ್ಟರಾಜರ ಮೌಲ್ಯದ ದಾರಿಯಲ್ಲಿ.

ಈಗಾಗಲೇ ಹೇಳಿದಂತೆ ಗಾನಯೋಗಿ ಗಂಧರ್ವ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಹುಮಾಯೂನ್ ಅವರು ಕೇವಲ ಸಂಗೀತದಲ್ಲಿ ಮಾತ್ರವಲ್ಲದೇ ಬದುಕಿನಲ್ಲಿಯೂ ಸಹ ಪುಟ್ಟರಾಜರ ತತ್ವಗಳನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಈ ಬದ್ಧತೆಯ ಕಾರಣಕ್ಕಾಗಿಯೇ ಅವರಿಗೆ ಇಂದೂ ಸಹ ಬದುಕಿನ ಸರಳತೆ, ಸಹಕಾರ ಗುಣ, ಪರರಿಗೆ ಸ್ಪಂದಿಸುವ ಗುಣ ಮತ್ತು ತತ್ವಯುತ ಬದುಕನ್ನು ಜೀವಿಸಲು ಸಾಧ್ಯವಾಗಿದೆ.

ಹರ್ಲಾಪುರ್ ಅವರ ಕುಟುಂಬಕ್ಕೆ ಭೇಟಿ ನೀಡುವ ಬಹುಮಂದಿಯ ಅಭಿಪ್ರಾಯವು ಇದೇ ಆಗಿದ್ದು ಅವರ ಜೀವನ ಶೈಲಿಯ ಕಾರಣಕ್ಕೇ ಅವರೊಂದಿಗೆ ಹೆಚ್ಚು ಹೆಚ್ಚು ಬಾಂಧವ್ಯದಿಂದ ಜೀವಿಸುವ ಜನ ಸಮುದಾಯವಿದೆ. ಈಗಾಗಲೇ ದೇಶಾದ್ಯಂತ ಕೋಮು ಬೀಜಗಳು ರಾಜಕೀಯ ಲಾಭಕ್ಕಾಗಿ ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿರುವ ಈ ವೇಳೆ ಇಂತಹ ಕುಟುಂಬಗಳು ಅಂತವರ ಸಮಾಜವಿರೋಧಿ ಪ್ರಯತ್ನಗಳಿಗೆ ತಡೆಯನ್ನು ಒಡ್ಡಬಹುದೆಂದು ಕಾಣುತ್ತದೆ.

Please follow and like us:

Leave a Reply

Your email address will not be published. Required fields are marked *