ನಾಗಮಂಡಲದ ಗಿರೀಶ್ ಕಾರ್ನಾಡ್ ಅಸ್ತಂಗತ – ಮುಂದುವರೆದ ವಿದ್ಯಾವಂತರ ಸಂಭ್ರಮಿಸುವ ವಿಕೃತಿ !

ನಾಟಕ ರಾಜ್ಯ ರಾಷ್ಟ್ರೀಯ ಸಾಹಿತ್ಯ

ತಮ್ಮ ನಾಟಕ. ಗದ್ಯ ಪದ್ಯಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯನ್ನು  ನೀಡಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಹಿರಿಯ ವಿಚಾರವಾದಿ ಡಾ.ಗಿರೀಶ್ ಕಾರ್ನಾಡ್ ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ.

Related image

ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ವಿರಳವಾಗಿ ಬರೆದಿದ್ದಾರಾದರೂ ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಯಲ್ಪಡುವ ಗಿರೀಶ್ ಕಾರ್ನಾಡ್, ಕನ್ನಡದಲ್ಲಿ ನಾಟಕ ರಚಿಸುತ್ತಾ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಾಂಸ್ಕ್ರತಿಕ ವಕ್ತಾರರಾಗಿ ಕೆಲಸ ಮಾಡಿದವರು.

ಪರಿಚಯ :

ಗಿರೀಶ್ ಕಾರ್ನಾಡರು 1934 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು.  ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರಕನ್ನಡದ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ, ಹಾಗೂ ಪದವಿ ಶಿಕ್ಷಣ  ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಯಿತು.  ಆ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡ್ ನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. 

Image result for karnad patient

ಆಕ್ಸ್ ಫರ್ಡ್ ನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಏಷ್ಯಾದ ಪ್ರಥಮ  ವ್ಯಕ್ತಿ ಇವರಾಗಿದ್ದಾರೆ.   ಮದ್ರಾಸಿನಲ್ಲಿ ನೌಕರಿಯಲ್ಲಿದ್ದ ಇವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.  ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೂಡಾ ಅವರು ಕಾರ್ಯನಿರ್ವಹಿಸಿದ್ದಾರೆ.

ಸಾಹಿತ್ಯ ಲೋಕದ ಹೆಜ್ಜೆಗಳು :

ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಕಾರ್ನಾಡರ ಪ್ರಮುಖ ನಾಟಕ ಕೃತಿಗಳು.  ಅಲ್ಲದೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಹೌದು.  ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮುಂತಾದ  ಸಿನಿಮಾಗಳು; ಸೂಫಿ ಪಂಥ,  ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ. 

Image result for Girish karnad tughlak

ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಒಟ್ಟಿನಲ್ಲಿ ಪ್ರಗತಿಪರ ಲೋಕದ ಹಾಗೂ ಕನ್ನಡ ಸಾಹಿತ್ಯ ಲೋಕದ ಪ್ರಮುಖ ದನಿಯಾಗಿದ್ದ ಕಾರ್ನಾಡರ ತಲೆದಂಡ, ಟಿಪ್ಪು ಸುಲ್ತಾನ್ ಕಂಡ ಕನಸುಗಳು, ಹಯವದನ, ನಾಗಮಂಡಲ, ಯಯಾತಿ, ತುಘಲಕ್ ನಾಟಕಗಳು ಸಾಹಿತ್ಯ ವಲಯದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದ್ದವು. ಇದಿಷ್ಟೇ ಅಲ್ಲದೇ ಕನ್ನಡ ಚಿತ್ರ ರಂಗಕ್ಕೂ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಇವರು ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿದ್ಯಾವಂತರಲ್ಲಿ ಹೆಚ್ಚಾಯಿತು  ಸಂಭ್ರಮಾಚರಣೆ ಮತ್ತು ವಿಕೃತಿ !

ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ ಗಿರೀಶ್ ಕಾರ್ನಾಡ್ ಅವರ ಸಾವಿನಿಂದ ಸಾಕಷ್ಟು ಮನಸ್ಸುಗಳು ನೋವಿನಲ್ಲಿದ್ದರೆ ಇನ್ನೊಂದೆಡೆ ಕಾರ್ನಾಡ್ ಅವರ ರಾಜಕೀಯ ನಿಲುವಿನ ಕಾರಣಕ್ಕೆ ಅವರ ಸಾವನ್ನು ಸಂಭ್ರಮಿಸುವ ಪ್ರವೃತ್ತಿ ಹೆಚ್ಚಾಗಿದೆ. “ಅರ್ಬನ್ ನಕ್ಸಲ್ ಸತ್ತು ಹೋದ”, ಮತ್ತೊಬ್ಬ “ಮೋದಿ ವಿರೋಧಿ ಸಾವಾಯಿತು”, “ಗಂಜಿ ಗಿರಾಕಿ ಹೋದ” “ನರಕ ಯಾತ್ರೆಗೆ ಹೋಗಿ ಬನ್ನಿ” ಎಂಬಂತಹ ಮಾತುಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮದ ವಿಕೃತಿಯು ಅನಾವರಣಗೊಂಡಿದೆ.

ದುರಾದೃಷ್ಟವೆಂದರೆ ಹೀಗೆ ಸಂಭ್ರಮಪಡುತ್ತಿರುವವರು ವಿದ್ಯಾವಂತ ಯುವಕ ಸಮುದಾಯ ಎಂಬುದು. ಕಾರ್ನಾಡರ ಕೃತಿಗಳನ್ನು ಓದದ, ಅವರು ಹೊಂದಿದ್ದ ವಿಚಾರಗಳ ಬಗ್ಗೆ ಸೂಕ್ತ ಜ್ಞಾನವಿಲ್ಲದ, ಕೇವಲ ರಾಜಕೀಯ ವ್ಯಕ್ತಿಗಳನ್ನು ಆರಾಧಿಸುವ ಕಾರಣದಿಂದ ಕಾರ್ನಾಡ್ ರನ್ನು ಅಮಾನವೀಯವಾಗಿ ನಿಂದಿಸುತ್ತಿದ್ದು ತಾವು ಓದಿದ್ದು ಕಲಿತದ್ದು ಎಲ್ಲವೂ ವ್ಯರ್ಥ ಎಂಬುದನ್ನು ಸಾಬೀತು ಮಾಡಿದ್ದಾರೆ.

ಕನ್ನಡದ ನಾಡು ನುಡಿಯ ಉಳಿವಿಗಾಗಿ ತಮ್ಮದೇ ಆದ ರೀತಿಯಲ್ಲ ಶ್ರಮಿಸಿದ ವ್ಯಕ್ತಿಗಳನ್ನು ಅವಮಾನಿಸುವವರ ವಿರುದ್ಧ ಸರ್ಕಾರವು ಸೂಕ್ತವಾದ ಕ್ರಮವನ್ನು ಕೈಗೊಂಡು ಇಂತಹ ಕೀಳು ಪ್ರವೃತ್ತಿಗೆ ಅಂತ್ಯ ಹಾಡಬೇಕಿದೆ.

Please follow and like us:

Leave a Reply

Your email address will not be published. Required fields are marked *