ಒಂದು ಹುಲಿಯ ಕಥೆ

ಸಾಹಿತ್ಯ

ಕಾಳಿಂಗನೆಂಬ ಗೊಲ್ಲನ ದೊಡ್ಡಿಯಲ್ಲಿ ಇದ್ದ ಹತ್ತಾರು ರಾಸುಗಳಲ್ಲಿ ನಾನು ಒಬ್ಬಳು.ನನ್ನ ಹೆಸರನ್ನು ಪುಣ್ಯಕೋಟಿ ಎಂದು ಕರೆಯಲಾಗುತಿತ್ತು.ಉದರರ ನಿಮಿತ್ತಂ ಎಂಬಂತೆ ಎಂದಿನಂತೆ ಕಾಡಿನಲ್ಲಿ ಹುಲ್ಲಿಗಾಗಿ ಓಡಾಟ. ಮಳೆ ಹೊಯ್ದು ಹುಲುಸಾಗಿ ಬೆಳೆದ ಹಸಿರು ಹುಲ್ಲಿನ ಸಂಭ್ರಮದಲ್ಲಿ ಮೈಮರೆತು ಕೊಟ್ಟಿಗೆಯಲ್ಲಿರುವ ತನ್ನ ಕಂದನನ್ನು ಕಾಣುವ ತವಕವನ್ನು ಮೆಟ್ಟಿ,ಮೈಗೆ ಕಸುವನ್ನು ತುಂಬುವುದರಲ್ಲಿ ,ಪಡುವಣದ ಸೂರ್ಯನು ಆಗಸದಲ್ಲಿ ಕಣ್ಮರೆಯಾಗಿದ್ದನ್ನು ನಾನು ಗಮನಿಸಲಿಲ್ಲ. ಅತ್ತಕಡೆ ಸಹಚರಿಗಳು ನಿರ್ಗಮಿಸಿದರೂ ನನಗೆ ಅರಿವಾಗಲಿಲ್ಲ. ಒಂದೇ ಸಮನೆ ಇಳೆಗೆ ಬಿದ್ದ ಅಮೃತಪನಿಯನ್ನು ಹೀರಿ ಬೆಳೆದ ಗರಿಕೆಹುಲ್ಲನ್ನು ಗಳಹುತ್ತಿದ್ದೆ . ಉದರ ಸಂತೃಪ್ತಿ ಭಾವ ಮೂಡಿದ ಮೇಲೆ ಬಗ್ಗಿಸಿದ ಕೊರಳೆತ್ತಿದರೆ ಎದೆಯಲ್ಲಿ ಭಯದ ಹೆದ್ದೆರೆ ಮೂಡಿದವು. ಕಾಡಿನಲ್ಲಿ ಚೆಲ್ಲಿದ್ದ ಸೂರ್ಯನ ಬೆಳಕು ಮರೆಯಾಗುತ್ತಾ ಒಂದೇಸಮನೆ ಕಪ್ಪು ರಾಶಿ ಸೃಷ್ಟಿ ಸಮಸ್ತವನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತ ಸಾಗುತ್ತಿತ್ತು.

Image result for punyakoti

ಕತ್ತಲೆಯಲ್ಲಿ ಕಣ್ ಕಟ್ಟಿದಂತೆ ಆದಾಗ ಧೈರ್ಯದ ಭರವಸೆ ಕೊಡಲು ನನ್ನ ಸಂಗಡಿಗರೇಆಗಲಿ ಅಥವಾ ನನ್ನೊಡೆಯ ಕಾಳಿಂಗನಾಗಲಿ ಅಲ್ಲಿರಲಿಲ್ಲ .ಭರವಸೆಯ ಕುಡಿಯುವ ಇಲ್ಲವಾಗಿ ಹೆಜ್ಜೆಹೆಜ್ಜೆಗೂ ಹೆದರುತ್ತಾ, ದಾರಿಯೇ ಕಾಣದ ಕಗ್ಗತ್ತಲ ಕಾಡಿನಲ್ಲಿ ,ಹಳೆಯ ನೆನಪುಗಳ ಜಾಡನ್ನು ಹಿಡಿಯುತ್ತಾ ಸಾವರಿಸಿಕೊಂಡು ದಾವಂತದಿ ದೊಡ್ಡಿಗೆ ಧಾವಿಸುವ ತವಕದಲ್ಲಿ ರುವಾಗಲೇ ಎದುರಾದವನು ಅರ್ಭುತ. ಕೆಲವು ವಾರಗಳಿಂದ ಬೇಟೆ ಸಿಗದೇ ,ಮುಪ್ಪಿನ ನಿಮಿತ್ತ ಮಿಂಚಿನ ವೇಗದಲ್ಲಿ ತಪ್ಪಿಸಿಕೊಂಡು ಬಿಡುತ್ತಿದ್ದ ಜಿಂಕೆ ಕಡವೆ ಹಾಗೂ ತನಗಿಂತಲೂ ಬಲಿಷ್ಠವಾದ ಕಾಡುಕೋಣಗಳನ್ನು ಮೇಲೆ ಹಾಯ್ದು ತನ್ನ ಹರಿತವಾದ ಪಂಜುಗಳಿಂದ ಮಾಂಸ ರಕ್ತಗಳನ್ನು ಹೀರಲಾಗದ ಚಡಪಡಿಕೆಯಿಂದ ಅಸಹಾಯಕತೆಯ ಕೋಪದಿಂದಲೂ ಕುದಿದು ,ಸುಲಭವಾದ ಬೇಟೆಗಾಗಿ ಕಾಯುತ್ತಿದ್ದ ವ್ಯಾಘ್ರ.

Related image

ಅವನು ಇನ್ನು ಕೆಲವೇ ದಿನಗಳಲ್ಲಿ ಬೀಳುತ್ತಿದ್ದ ಬುಡ ಅಲುಗಾಡುವ ಕೋರೆಹಲ್ಲುಗಳು ,ಪಂಜುಗಳು ಕ್ರೂರತೆಗಿಂತ ಕವಿದ ಕತ್ತಲೆಯ ಎದೆಯನ್ನು ಸೀಳಿ ವಜ್ರದಂತೆ ಪ್ರತಿಫಲಿಸುತ್ತಿದೆ ಕಣ್ಣುಗಳ ಕ್ರೂರತೆ ಕಂಡ ನನ್ನ ಜಂಘಾಬಲವೇ ಉಡುಗಿ ಹೋಯಿತು ,ದಾರಿಯೇ ಕಾಣದಾಯಿತು . ತಪ್ಪಿಸಿಕೊಂಡು ಓಡಿ ಹೋಗುವ ಪರ್ಯಾಯ ಆಲೋಚನೆಯು ,ಭಯ ಗೊಂದಲಗಳಿಂದ ಮಂದವಾದ ಬುದ್ದಿಗೆ ಹೊಳೆಯಲೇ ಇಲ್ಲ . ಹೊಳೆದಿದ್ದರೂ ಹಗುರ ದೇಹ ಭಾರದ ಜಿಂಕೆ ಚಿಗರೆಗಳಂತೆ ನೀಡಿದಾಗಿಯೂ ಹಾಗೂ ಬಲಿಷ್ಠವಾಗಿರುವ ಕಾಲುಗಳಲ್ಲವಲ್ಲ ನನ್ನವು ,ಅದು ಅಲ್ಲದೆ ತುಂಬು ಕೆಚ್ಚಲು ಮನಸಾರೆ ಭುಜಿಸಿದ ಹಸಿರಿನ ನವಿರು ಹುಲ್ಲು. ಈ ಮಣಭಾರವ ಹೊತ್ತು ಓಡುವುದಾದರೂ ಸಾಧ್ಯವಿಲ್ಲವೆಂದರಿತು ನಿಂತುಬಿಟ್ಟೆ .ಸಾವೇ ನನ್ನ ಮುಂದೆ ಪ್ರತ್ಯಕ್ಷವಾಗಿ ಇರುವಾಗ ತಪ್ಪಿಸಿಕೊಳ್ಳುವ ನಿರ್ವಾಹವೇ ಇಲ್ಲದಾದಾಗ ಒಂದೇ ಕ್ಷಣದಲ್ಲಿ ನಿರಾಸೆ ನಿರ್ವೇಗ,ಹತಾಶೆ ಅಸಹಾಯಕತೆಗಳು ಭಾವಗಳ ಬೇಗೆಯಲ್ಲಿ ಬೆಂದು ಹೋದೆ .

Related image

ಅಷ್ಟರಲ್ಲಿಯೇ ಅರ್ಭುದನು ನನ್ನನ್ನು ಸುತ್ತುವರೆದು ಇಡಿಯಾಗಿ ಗ್ರಹಿಸುತ್ತಾ ಅಡ್ಡಗಟ್ಟಿ ನನ್ನ ಮೇಲೆ ಹಾಯಲು ತನ್ನೆಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಿಕೊಳ್ಳುತ್ತಿತ್ತು .ಇನ್ನೇನು ನನ್ನ ಮೇಲೆ ಎರಗಬೇಕೆನ್ನುವಷ್ಟರಲ್ಲಿ ನಾನು ದಯನೀಯವಾಗಿ ಅರಚಿಕೊಂಡು ,ಕಂಗಾಲಾದ ನೋಟದೊಂದಿಗೆ ಸಹಾನುಭೂತಿಯಿಂದ ಬೇಡುತ್ತಾ ಒದರಾಡಿದೆ. ನನ್ನ ಆರ್ತನಾದವನ್ನು, ಕಂಡು ತುಂಬು ಜೀವನದ ಅಂಚಿನಲ್ಲಿರುವ, ತನ್ನ ಆಯುಷ್ಯದ ಉಳಿದ ದಿನಗಳನ್ನು ಎಣಿಸುತ್ತಿದ್ದ ಅರ್ಭುದನ ಮಾಗಿದ ಮನಸ್ಸಿನಲ್ಲಿ ಕರುಣೆಯ ರಸವು ಹರಿದಂತಾಯಿತೇನೊ!

ಯಾಕೋ ಬಾಣ ಹೂಡಲು ಎದೆಯೇರಿಸಿ ಸಿದ್ದನಾದ ಬೇಟೆಗಾರ , ಬಾಣವನ್ನು ಹಿಂದಕ್ಕೆ ಸೆಳೆದುಕೊಳ್ಳುವಂತೆ ,ಆಕ್ರಮಣಕ್ಕೆಂದು ಸಿದ್ದವಾಗಿದ್ದ ಸೆಟೆದು ನಿಂತ ಅವನ ದೇಹವು ಸಡಿಲಗೊಂಡಿತು .ಈ ಕ್ಷಣದವರೆಗೂ ಅರ್ಭುದನ ಕಣ್ಣುಗಳಲ್ಲಿ ಕಾಣುತ್ತಿದ್ದ ಕ್ರೌರ್ಯ ,ಅಕಾರಣವಾಗಿ ಕರಗುತ್ತಾ ಹೋದಂತೆ ಇದ್ದಕ್ಕಿದ್ದಂತೆ ನನ್ನಲ್ಲಿ ಅವನೊಂದಿಗೆ ತೆರೆದುಕೊಳ್ಳುವ ಧೈರ್ಯ ಹುಟ್ಟಿತು .ಪ್ರಾಣಿ ಸಹಜ ಭಾಷೆಯಲ್ಲಿ ನಾನು ಅಂಗಲಾಚಿ ಬೇಡಿಕೊಳ್ಳತೊಡಗಿದೆ.

Related image

“ನನಗೆ ಪ್ರಾಣ ಭಿಕ್ಷೆಯನ್ನು ಕೊಡು . ಎಂದಿನಂತೆ ಕಾಡಿನಲ್ಲಿ ಮೇದು ಸಂಗಡಿಗರೊಡನೆ ತೆರಳಬೇಕಾದ ನಾನು ಎಚ್ಚರತಪ್ಪಿ ಉಳಿದು ಹೋಗಿದ್ದೇನೆ. ನನ್ನ ಒಡೆಯನು ಎನ್ನ ಇಲ್ಲದಿರುವಿಕೆಯನ್ನು ಗಮನಿಸಿರಲಾರನು. ದೊಡ್ಡಿಯೊಳಗೆ ನನ್ನ ಎಳೆಯ ಕಂದಮ್ಮ ನನಗಾಗಿ ಹಸಿವಿನಿಂದ ಹಂಬಲಿಸುತ್ತಾ ನಿರೀಕ್ಷಿಸುತ್ತಿರುತ್ತದೆ. ದಯಮಾಡಿ ನನ್ನನ್ನು ಕೊಲ್ಲದೇ ಕರುಣಿಸಿ ದಯತೋರು”. ಹೀಗೆ ನನ್ನ ಪರಿಪರಿಯ ನಿವೇದನೆಗಳಿಂದ ಅರ್ಬುದನು ಯೋಚನೆಯಲ್ಲಿ ಮುಳುಗಿರಲು ನನ್ನ ಕರುಣಾಜನಕ ಧ್ವನಿಯು ಅವನ ಮನಸ್ಸಿನ ಸಹಜ ಆತ್ಮಭಾವಗಳ ತಳವನ್ನು ತಡಕಿರಲು, ಅವನು ಆಕಸ್ಮಿಕ ಬೈಕಿಗೆ ತಡವರಿಸಿ ಸಾವರಿಸಿಕೊಂಡು ಹೇಳಿದನು. “ಇಂತಹ ಅದೆಷ್ಟೋ ಯಾಚನೆಯ ದನಿಗಳನ್ನು ನನ್ನ ರಕ್ತ,ಮಾಂಸ, ಎಲುಬುಗಳಲ್ಲಿ ನುಂಗಿ ಇಲ್ಲಿಯವರೆಗೂ ಬದುಕುಳಿದಿದ್ದೇನೆ. ಆದರೆ ಏಕೋ ನಿನ್ನ ಅಂಗಲಾಚುವ ಚೀತ್ಕಾರ ಕೇಳಿದರೆ ಯಾರ ಕರುಣೆಯ ಭಾವ ಒಸರುತ್ತಿದೆ.

ನಿನ್ನನ್ನು ಕೊಲ್ಲುವ ಮನಸು ಬಾರದು.ಆದರೂ ಇಡೀ ಸೃಷ್ಟಿಯೇ ಒಂದು ಸಹಜ ನಿಯಮಕ್ಕೆ ಒಳಪಟ್ಟಿದೆ. “ಆಶನಾಯ ಹಿ ಮೃತ್ಯುಃ ” – ಎಂದರೆ ಹಸಿವೇ ಸಾವು .ಸಾವಿಗೆ ಮೂಲ ಹಸಿವು .ಒಂದರ ಮರಣ ಇನ್ನೊಂದರ ಹಸಿವಿನಲ್ಲಿದೆ ಒಂದರ ಹಸಿವು ಇನ್ನೊಂದರ ಮರಣದಲ್ಲಿ. ಇದು ನಿತ್ಯ ನಿರಂತರ ಸರಪಳಿ .ಈ ಸರಪಳಿಯಲ್ಲಿ ಅನೇಕ ಕೊಂಡಿಗಳಿವೆ . ಅವುಗಳಲ್ಲಿ ಒಂದು ಕೊಂಡಿ ಕಳಚಿದರೂ ಇಡೀ ಸೃಷ್ಟಿಯೇ ವಿನಾಶದತ್ತ ತೆರಳುತ್ತದೆ. ಸೃಷ್ಟಿಯ ಸಕಲ ಚರಾಚರಗಳ ನಡುವೆ ಇರುವ ಸಂಬಂಧವು ,ನಿವಾರಿಸಿಕೊಳ್ಳಲಾಗದ ಸೃಷ್ಟಿಯ ಅಸ್ತಿತ್ವಕ್ಕೆ ,ಸುಸ್ಥಿರತೆಗೆ ಹೇತುವಾದ ಒಂದು ಅಂಶವಾಗಿದೆ .ಈ ನಿಯಮದ ಹೊರತು ಬೇರೆ ಆಯ್ಕೆಯಿಲ್ಲ ನಮಗೆ.ಈ ಸಂಬಂಧವನ್ನು ಧಿಕ್ಕರಿಸಿದವರು ,ವಿರೋಧಿಸಿದವರು ನಿಸರ್ಗ ವಿರೋಧಿಗಳಾಗುತ್ತಾರೆ .ನಿಸರ್ಗ ಸಹಜ ನ್ಯಾಯಕ್ಕೆ ಸಂವಿಧಾನಕ್ಕೆ ಎರವಾಗುತ್ತಾರೆ.ಇಂತಹ ಸರಪಳಿ ಸಂಬಂಧದಲ್ಲಿ ನಾನು ನೀನು ಬಂಧಿಗಳಾಗಿದ್ದೇವೆ .

Image result for punyakoti poem

ನನ್ನ ಅಸ್ತಿತ್ವದ ಪ್ರಶ್ನೆಯ ಸಂದರ್ಭದಲ್ಲಿ ಅದು ನಿನ್ನ ಉಳಿವಿನ ಪ್ರಶ್ನೆಯು ಹಾಗೂ ನನ್ನ ವಿನಾಶದ ಫಲಿತಾಂಶವಾಗಿಯೂ ಇದೆ. ಜೀವ ಅಸ್ತಿತ್ವಕ್ಕೆ ಉಳಿವು ಅಳಿವು ಒಂದೇ ನಾಣ್ಯದ ಎರಡು ಮುಖಗಳು. ಅದನ್ನು ಹಾರಿ ಚಿಮ್ಮಿಸಿದಾಗ ಒಂದು ಮುಖವಷ್ಟೇ ಉಳಿಯುವುದು ಅನಿವಾರ್ಯ . ಕಳೆದ ಹಲವಾರು ದಿನಗಳಿಂದ ನಾನು ಹಸಿವಿನಿಂದ ತತ್ತರಿಸಿದ್ದರೂ ನಿನ್ನ ಆದ್ರತೆಯನ್ನು ಕಂಡು ನಿನ್ನ ಮೇಲೆರಗಿ ನಿನ್ನ ದೇಹವನ್ನು ಬಗೆದುಣ್ಣಲು ಮೈ-ಮನಸ್ಸು ಕ್ರೌರ್ಯದಿಂದ ಪುಟಿದೇಳುತಿಲ್ಲ. ಇಂದೇಕೋ ಅನೂಹ್ಯವಾದ ಹಿಂಜರಿಕೆ ಕವಿಯುತ್ತಿದೆ” ಎಂದು ತನ್ನ ಗಾಢವಾದ ಆಲೋಚನೆಯನ್ನು ಹರಿಯ ಬಿಟ್ಟಿತು ಸ್ವಗತದಲಿ.

ಅವನೆತ್ತಿದ ನಿಸರ್ಗ ನಿಯಮ ನನಗೆ ಸಹಜ ನ್ಯಾಯದಂತೆ ಕಂಡು ಪ್ರತಿಯಾಡಲು ಏನೊಂದೂ ತಿಳಿಯಲಿಲ್ಲ. ನಿಸರ್ಗ ವಿರೋಧಿ ಬಯಕೆಗೆ ನಾನೇ ಹಿಂಜರಿದೆ .ನಾನು ಸೃಷ್ಟಿ ಸಹಜ ನ್ಯಾಯಕ್ಕೆ ಸಮ್ಮತವಾಗಿ ನಡೆದು,ಅವನ ಆಹಾರವಾಗಲು ಸಿದ್ಧವಾಗಬೇಕು, ಇಲ್ಲವೇ ಆತನೊಂದಿಗೆ ಹೋರಾಡಿ ನನ್ನ ಉಳಿವನ್ನು ಉಳಿಸಿಕೊಳ್ಳಬೇಕು .ಆದರೆ ಹೋರಾಡಲು ನನಗೆ ಪ್ರಕೃತಿಯೇ ಆಣತಿ ನೀಡಿಲ್ಲ ಹಾಗಾಗಿ ಮೊದಲ ಆಯ್ಕೆಯೇ ಉತ್ತಮವೆಂದು ತೋರಿ ನನ್ನನ್ನು ನಾನೇ ಅವನಿಗೆ ಸಮರ್ಪಿಸಿಕೊಳ್ಳಲು ಸಿದ್ದವಾದೆ.

Related image

ಅರ್ಭುದನಾದರೋ, ಒಂದೆಡೆ ನಿಸರ್ಗ ನ್ಯಾಯ ಮತ್ತೊಂದೆಡೆ ಜೀವನ ಪರಿತ್ಯಾಗಗಳ ದೀರ್ಘ ಆಲೋಚನೆಯಲ್ಲಿ ಮುಳುಗಿರುವುದನ್ನ ಕಂಡ ನಾನೇ ಮುಂದುವರೆದು “ನಿಸರ್ಗ ನಿಯಮವನ್ನು ಸ್ಥಿರತೆಯ ನ್ಯಾಯಕ್ಕಾಗಿ ಅರ್ಪಿಸಿಕೊಳ್ಳಲು ಸಿದ್ಧಳಾಗಿದ್ದೇನೆ. ಬಗೆ ಎನ್ನ ಒಡಲನ್ನು ,ನನ್ನನ್ನು ಸೇವಿಸಿ ನಿನ್ನ ಪ್ರಾಣವನ್ನು ಕಾಯ್ದುಕೋ .ಇದುವೇ ನಿಸರ್ಗದ ಆಯ್ಕೆ ,ನಿಸರ್ಗ ನಿಯಮ .ನಾವು ಈ ನಿಯಮವನ್ನು ಮುರಿದು ಸೃಷ್ಟಿ ವಿನಾಶಕ್ಕೆ ಎಡೆ ಕೊಡುವುದು ಸಲ್ಲದು .ನೀನು ನನ್ನನ್ನು ಕೊಲ್ಲದೇ ಬಿಡಬಹುದು ,ಆದರೇನಂತೆ ಇಂದಲ್ಲ ನಾಳೆ ಯಾವ ಹಿಂಸ್ರ ಪ್ರಾಣಿಗಾದರೂ ಆಹಾರವಾಗುವ ಸರದಿ ಬಂದೇ ತೀರುತ್ತದೆ .ನೀನು ನನ್ನನ್ನು ಸೇವಿಸದೇ ಬಿಟ್ಟದ್ದೇ ಆದಲ್ಲಿ ನೀನು ಕೆಲವೇ ದಿನಗಳಲ್ಲಿ ಸಾಯುವುದು ಖಂಡಿತಾ .ಆತ್ಮಹತ್ಯೆಯು ನಿಸರ್ಗ ವಿರೋಧಿ ಗುಣ.ನಿಸರ್ಗ ತನ್ನ ಕುಡಿಗಳಿಗೆ ಆ ಹಕ್ಕನ್ನು ಕೊಟ್ಟಿಲ್ಲ “ಎಂದು ಸಮರ್ಪಣೆಗೆ ಸಿದ್ಧವಾದೆ .

ನನ್ನ ಮಾತುಗಳಿಂದ ಆತನ ಮನಸ್ಸು ಮತ್ತಷ್ಟು ಹೊಯ್ದಾಟಕ್ಕೆ ಸಿಲುಕಿಕೊಂಡಿತು. ನನ್ನನ್ನು ಮುಪ್ಪು ಆವರಿಸುತ್ತಿದೆ ,ಬದುಕಿದರೆ ಇನ್ನೆಷ್ಟು ದಿನಗಳು ?ಎರಡು ದಿನಗಳಲ್ಲಿ ಮಣ್ಣುಗೂಡಲಿರುವ ನಾನು ನನ್ನ ಜೀವ ಉಳಿಸಿಕೊಳ್ಳಲು ಕಿರಿಪ್ರಾಯದವಳಾದ ನಿನ್ನನ್ನು ಕೊಲ್ಲುವುದು ತರವೇ ? ಆತ್ಮಹತ್ಯೆ ನಿಸರ್ಗ ನಿಯಮಕ್ಕೆ ಒಪ್ಪಿತವಲ್ಲ .ಆದರೂ ನಿನ್ನನ್ನು ಕೊಂದು ತಿನ್ನಲು ಯಾಕೋ ಮನವು ಹಿಂಜರಿಯುತಿದೆ “ಎಂದ ಅವನ ಮಾತನ್ನು ತಡೆದು “ನಿಸರ್ಗದ ರಾಜ್ಯದಲ್ಲಿ ಜೀವಿಗಳ ಅಸ್ತಿತ್ವಕ್ಕಾಗಿ ಹೋರಾಟವೇ ಸತ್ಯ ಹಾಗೂ ಅಂತಿಮವಾಗಿರುತ್ತದೆ .ಜೀವಿಗಳ ಸಂಬಂಧ ನಿರಂತರ, ಸಾವಯವ. ಅವುಗಳಲ್ಲಿ ಸರಿ-ತಪ್ಪುಗಳು ,ನೈತಿಕತೆ ಎದುರಾಗದು . “ಆಶನಾಯ ಹಿಃ ಮೃತ್ಯುಃ”- ಇದುವೇ ನಿಸರ್ಗದ ಪರಮ ಸತ್ಯ ಹಾಗೂ ಕಾನೂನು .ಈ ನಿಸರ್ಗ ಧರ್ಮವನ್ನು ಯಾರು ಮೀರಲು ಸ್ವತಂತ್ರರಲ್ಲ. ಆದುದರಿಂದ ನಿಸರ್ಗ ಧರ್ಮವನ್ನು ಪಾಲಿಸು “-ಎಂದು ದಿಟ್ಟವಾಗಿ ನುಡಿದು ಆತ್ಮಸಮರ್ಪಣೆಯ ಯಜ್ಞಕ್ಕೆ ಸಿದ್ಧಳಾದೆ .

Image result for punyakoti kathe

ಅರ್ಭುದನು ತನ್ನ ಮಾನಸಿಕ ತೊಳಲಾಟವನ್ನು ಸ್ಥಿಮಿತಕ್ಕೆ ತಂದುಕೊಂಡು ತನ್ನ ಹಸಿವನ್ನು ಹಿಂಗಿಸಿಕೊಳ್ಳಲು ನನ್ನ ಮೇಲೆರಗಲು ಸಿದ್ಧವಾದನು. ಇಷ್ಟರಲ್ಲಿಯೇ ,ತನ್ನ ಪ್ರೀತಿಯ ಪುಣ್ಯಕೋಟಿಯು ದೊಡ್ಡಿಯಲ್ಲಿ ಇಲ್ಲದ್ದನ್ನು ಗುರುತಿಸಿದ ಗೊಲ್ಲನು, ಅದನ್ನು ಹುಡುಕಿಕೊಂಡು ಸಂಗಡಿಗರ ಜೊತೆಯಲ್ಲಿ ಕಾಡಿನ ದಾರಿಯಲ್ಲಿ ಪಂಜಿನ‌ ಬೆಳಕಿನಲ್ಲಿ ನಡೆದು ಬರುತ್ತಿರಲು ಇನ್ನೇನು ಅರ್ಭುದ ನನ್ನ ಮೇಲೆರಗಿ ಗುಂಡಿಗೆಯ ಸೀಳಬೇಕೆನ್ನುವಷ್ಟರಲ್ಲಿ ,ಈ ದೃಶ್ಯವನ್ನು ಕಂಡ ಕಾಳಿಂಗ ಹಾಗೂ ಅವನ ಸಂಗಡಿಗರು ಪರಿಸ್ಥಿತಿಯನ್ನು ಅರಿತು, ಆತ್ಮರಕ್ಷಣೆಗಾಗಿ ತಂದಿದ್ದ ದೊಣ್ಣೆಗಳನ್ನು ಭರ್ಜಿಗಳನ್ನು ಬೀಸಿ ಅರ್ಭುತನ ತಲೆಯನ್ನು ಜಜ್ಜಿದೊಡನೆ ,ಮುಪ್ಪು ಹಾಗೂ ಹಸಿವೆಗಳಿಂದ ಕಂಗೆಟ್ಟ ಅರ್ಭುದ ಹೆಚ್ಚು ಪ್ರತಿರೋಧ ತೋರಲಾಗದೆ, ತಪ್ಪಿಸಿಕೊಳ್ಳಲೂ ಸಾಧ್ಯವಾಗದೆ, ಒಂದೇ ಸಮನೆ ಬೀಳುತ್ತಿದ್ದ ಪೆಟ್ಟುಗಳನ್ನು ತಾಳಲಾರದೇ ರಕ್ತಕಾರುತ್ತಾ  ಕೊನೆಗೂ ಸಾವಿಗೆ ಶರಣಾಯಿತು ,ಮೌನವಾಯಿತು. ನನ್ನ ಪ್ರಾಣ ಒಳಿತಾದರೂ ,ತಂತಾನೆ ಕಣ್ಣಾಲಿ ತೇವಗೂಡಿತು. ನಿಸರ್ಗವು ನನ್ನ ಮತ್ತು ಅರ್ಭುತನ ಸಾವಯವ ಸಂಬಂಧದ ನಡುವೆ ನನ್ನೊಡೆಯ ಕಾಳಿಂಗ ಅನಾಮತ್ತಾಗಿ ಪ್ರವೇಶಿಸಿದ್ದ.

ಲೇಖಕರು : ಶಿಲ್ಪ ಬಿ.ಎಂ

(ಸಹಾಯಕ ಪ್ರಾಧ್ಯಾಪಕರು)

Please follow and like us:

Leave a Reply

Your email address will not be published. Required fields are marked *